ತಿರುವನಂತಪುರಂ (ಕೇರಳ) : ಕನ್ನಡ ಚಿತ್ರರಂಗದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿನ ಸುದ್ದಿ ಮಾಸುವ ಮುನ್ನವೇ ಮತ್ತೋರ್ವ ನಟಿ ನಿಧನರಾಗಿದ್ದಾರೆ. ಕೇರಳದ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ಅಪರ್ಣಾ ನಾಯರ್ ನಿನ್ನೆ (ಆಗಸ್ಟ್ 31) ಸಂಜೆ 7 ಗಂಟೆ ಸುಮಾರಿಗೆ ರಾಜಧಾನಿ ತಿರುವನಂತಪುರಂನ ಕರಮಾನ ತಾಲಿಯಾಲ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮಲಯಾಳಂ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್ ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತದೇಹವನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ನಟಿ ಸಂಜಿತ್ ಎಂಬುವರನ್ನು ವಿವಾಹವಾಗಿದ್ದು, ತ್ರಾಯಾ ಮತ್ತು ಕೃತಿಕಾ ಎಂಬ ಇಬ್ಬರು ಮಕ್ಕಳು ಸಹ ಇವರಿಗೆ ಇದ್ದಾರೆ. ಕರಮಾನ ಪೊಲೀಸರು ತನಿಖೆಯ ಹೊಣೆ ಹೊತ್ತಿದ್ದು, ತನಿಖೆ ಬಳಿಕವಷ್ಟೇ ನಟಿಯ ಸಾವಿಗೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.
ಅಪರ್ಣಾ ನಾಯರ್ ಅವರು ತಿರುವನಂತಪುರಂನಲ್ಲಿ ವಾಸವಾಗಿದ್ದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ಘಟನೆ ನಡೆದ ವೇಳೆ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಇದ್ದರು ಎಂದು ಹೇಳಲಾಗಿದೆ. ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಮಗಳನ್ನು ಕಳೆದುಕೊಂಡ ಕಟುಂಬಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ :ಹಲವು ಅಪರಾಧ ಪ್ರಕರಣ ಬೇಧಿಸಿದ್ದ ಪೊಲೀಸ್ ಶ್ವಾನ ಕಾವ್ಯ ಇನ್ನಿಲ್ಲ