ಹೈದರಾಬಾದ್:ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ಕಾತರತೆ ಹೆಚ್ಚಿಸಿದೆ. ಬಿಡುಗಡೆಗೆ ಮುನ್ನವೇ ಬುಕ್ಕಿಂಗ್ನಲ್ಲಿ ದಾಖಲೆ ನಿರ್ಮಿಸಿರುವ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ತೆಲಂಗಾಣ ಸರ್ಕಾರ ಕೂಡ ಅಭಿಮಾನಿಗಳು ಮತ್ತು ಸಿನಿ ತಂಡಕ್ಕೆ ಮತ್ತಷ್ಟು ಸಂತಸ ನೀಡಿದೆ. ಕಾರಣ, ತೆಲಂಗಾಣದಲ್ಲಿ ಮಧ್ಯರಾತ್ರಿಯಿಂದಲೇ ಸಿನಿಮಾದ ಶೋ ಆರಂಭವಾಗಲಿದೆ. ಜೊತೆಗೆ ಟಿಕೆಟ್ ದರ ಏರಿಕೆಗೂ ಸರ್ಕಾರ ಅನುಮತಿ ನೀಡುವ ಮೂಲಕ ಸಿನಿ ತಂಡಕ್ಕೂ ಸಂತಸ ಮೂಡಿಸಿದೆ.
ಮಾಧ್ಯಮಗಳ ವರದಿ ಪ್ರಕಾರ, ಚಿತ್ರ ಬಿಡುಗಡೆಯ ಮೊದಲ ವಾರಾಂತ್ಯದಲ್ಲಿ ಮಧ್ಯರಾತ್ತಿ 1 ಮತ್ತು ಬೆಳಗಿನ ಜಾವ 4 ಗಂಟೆಗೆ ಶೋ ಪ್ರಾರಂಭಿಸಲು ತೆಲಂಗಾಣ ಸರ್ಕಾರ ಹಸಿರು ನಿಶಾನೆ ತೋರಿದೆ. ಪ್ರಭಾಸ್ ಅಭಿಮಾನಿಗಳ ಕ್ರೇಜ್ ಹಿನ್ನೆಲೆ ಶೋ ಸಂಖ್ಯೆ ಹೆಚ್ಚಿಸಲು ಸರ್ಕಾರ ಸಮ್ಮತಿ ನೀಡಿದೆ. ಇದರ ಜೊತೆಗೆ ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾದ ಟಿಕೆಟ್ ದರವನ್ನು 100 ರೂ ವರೆಗೆ ಏರಿಕೆ ಮಾಡಲು ಕೂಡ ಸರ್ಕಾರ ಒಪ್ಪಿದ್ದು, ಚಿತ್ರ ನಿರ್ಮಾಪಕರು ಮತ್ತು ವಿತರಕರಲ್ಲಿ ಹರ್ಷ ಮೂಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರ, "ತೆಲಂಗಾಣ ರಾಜ್ಯದಲ್ಲಿ 'ಸಲಾರ್' ಸಿನಿಮಾದ ಆರನೇ ಶೋ ಡಿಸೆಂಬರ್ 22ರ ಬೆಳಗಿನ ಜಾವ 4ಗಂಟೆಗೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಫ್ಲೆಕ್ಸ್ಗಳಲ್ಲಿ ಟಿಕೆಟ್ ದರವನ್ನು 65 ರೂ ನಿಂದ 100 ರೂವರೆಗೆ ಹೆಚ್ಚಳ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೇ 22 ಡಿಸೆಂಬರ್ ಮಧ್ಯರಾತ್ರಿ ಕೆಲವು ಆಯ್ದ ಥಿಯೇಟರ್ನಲ್ಲಿ 1 ಗಂಟೆ ಶೋ ನಡೆಸಬಹುದಾಗಿದೆ" ಎಂದು ತಿಳಿಸಿದೆ.