ಹೈದರಾಬಾದ್:ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ. ಸಿನಿಮಾ ತಾರೆಯರು ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಟರಾದ ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ಸುಮಂತ್, ಸಂಗೀತ ನಿರ್ದೇಶಕ ಕೀರವಾಣಿ ಮತ್ತಿತರರು ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು.
ಹೈದರಾಬಾದ್ನ ಜುಬಿಲಿ ಹಿಲ್ಸ್‌ನ ಓಬುಲ್ ರೆಡ್ಡಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಜೂ.ಎನ್‌ಟಿಆರ್ ತಮ್ಮ ಕುಟುಂಬದೊಂದಿಗೆ ಮತ ಹಾಕಿದರು. ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಹಾಗೂ ತಾಯಿ ಶಾಲಿನಿ ಜೊತೆಗಿದ್ದರು. ಬಿಎಸ್‌ಎನ್‌ಎಲ್ ಕೇಂದ್ರದ ಮತಗಟ್ಟೆಯಲ್ಲಿ ಅಲ್ಲು ಅರ್ಜುನ್ ಹಕ್ಕು ಚಲಾಯಿಸಿದರು. ಸುಮಂತ್ ಜುಬಿಲಿ ಹಿಲ್ಸ್ ಕ್ಲಬ್‌ನಲ್ಲಿ ಮತದಾನ ಮಾಡಿದ್ದಾರೆ.
ಹೈದರಾಬಾದ್ ಜಿಲ್ಲಾ ಚುನಾವಣಾಧಿಕಾರಿ ರೊನಾಲ್ಡ್ ರೋಸ್ ಅವರು ಮಾದಾಪುರದ ವೆಂಕಟೇಶ್ವರ ಫೈನ್ ಆರ್ಟ್ಸ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿಯೊಂದಿಗೆ ಅವರು ಮತಗಟ್ಟೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ರೊನಾಲ್ಡ್ ರೋಸ್, ನಗರದ ಜನತೆ ಮತದಾನದ ಹಕ್ಕನ್ನು ಚಲಾಯಿಸುವಂತೆ ಕೋರಿದರು.