'ಕೆಂಡ' ಹೊಸ ಪ್ರತಿಭೆಗಳ ಹೂರಣದಿಂದ ಸಿದ್ಧಗೊಂಡಿರುವ ಭಿನ್ನ ಕಥಾನಕದ ಚಿತ್ರ. ಆಕರ್ಷಕ ಮತ್ತು ಕ್ಯಾಚಿ ಶೀರ್ಷಿಕೆಗಳ ಪಟ್ಟಿಯಲ್ಲಿ ಬರುವ ಕನ್ನಡದ ಚಿತ್ರಗಳಲ್ಲಿ ಇದು ಕೂಡ ಒಂದು. ಭಿನ್ನ ಹೆಸರು ಇಟ್ಟುಕೊಂಡು ಬಣ್ಣದ ಬಜಾರ್ಗೆ ಲಗ್ಗೆ ಇಡಲು ಬರುತ್ತಿರುವ 'ಕೆಂಡ' ಚಿತ್ರ ದಿನದಿಂದ ದಿನಕ್ಕೆ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸುತ್ತಿದೆ. ಮೋಷನ್ ಪೋಸ್ಟರ್ ಮೂಲಕ ಅಗಾಧ ಪ್ರಮಾಣದಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ.
ಮಾಸ್ ಎಲಿಮೆಂಟ್ಸ್ಅನ್ನು ಚಿತ್ರದ ಟೀಸರ್ನಲ್ಲಿದ್ದು ಗಹನವಾದ ಕಥೆಯ ಸುಳಿವಿನೊಂದಿಗೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಓರ್ವ ಸಾಮಾನ್ಯ ಹುಡುಗ ವ್ಯವಸ್ಥೆಯ ಅಡಕತ್ತರಿಗೆ ಸಿಲುಕಿ ಅಸಾಮಾನ್ಯವಾಗಿ ಠೇಂಕರಿಸುವ ಕಥೆ ಕೆಂಡ ಚಿತ್ರದ ಜೀವಾಳ. ಈ ಬಗ್ಗೆ ಚಿತ್ರತಂಡವೇ ಇತ್ತೀಚೆಗೆ ಒಂದಷ್ಟು ಮಾಹಿತಿಗಳನ್ನು ಬಿಟ್ಟುಕೊಟ್ಟಿತ್ತು. ಇದೀಗ ಕಥೆಯ ಒಟ್ಟಾರೆ ಸುಳಿವನ್ನು ಬಚ್ಚಿಟ್ಟುಕೊಂಡೇ, ಒಂದಿಡೀ ಸಿನಿಮಾದ ಆಂತರ್ಯವನ್ನು ಈ ಟೀಸರ್ ಮೂಲಕ ಚಿತ್ರ ನಿರ್ದೇಶಕರು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ರಂಗಭೂಮಿ ಪ್ರತಿಭೆಗಳೇ ಈ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ 'ಗಂಟುಮೂಟೆ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ರೂಪಾ ರಾವ್ ಈ ಬಾರಿ ನಿರ್ದೇಶನ ಮಾಡದೇ, ಹೊಸ ಪ್ರತಿಭೆಗಳ ಕೆಂಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಗಂಟುಮೂಟೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದುಕೊಂಡು, ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದ ಸಹದೇವ್ ಕೆಲವಡಿ ಕೆಂಡ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಭಿನ್ನ ಕಥಾನಕವನ್ನು ಮುಟ್ಟಿರುವ ಸಹದೇವ್ ಕೆಲವಡಿ ವಿಭಿನ್ನ ಕಥೆಯ ಸಿನಿಮಾ ಕೊಡುವ ಸೂಚನೆ ನೀಡಿದ್ದಾರೆ.
ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಮೊನ್ನೆ ತಾನೇ ಬಿಡುಗಡೆಯಾಗಿದ್ದ ಚಿತ್ರದ ಮೋಷನ್ ಪೋಸ್ಟರ್ ಸಿನಿ ರಸಿಕರಿಗೆ ರಸದೌತನ ನೀಡಿತ್ತು. ಇದೀಗ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಆರಂಭಿಕ ಗೆಲುವನ್ನೂ ಪಡೆದುಕೊಂಡಿದೆ. ಸದ್ಯ ಟೀಸರ್ನಿಂದ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿರುವ ಕೆಂಡ, ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ:'ರೋಜಿ'ಗಾಗಿ ಒಂದಾದ ಲೂಸ್ ಮಾದ ಯೋಗಿ-ಶ್ರೀನಗರ ಕಿಟ್ಟಿ