ಸ್ಯಾಂಡಲ್ವುಡ್ ನಟಿ ಮಮತಾ ರಾಹುತ್ ಅಭಿನಯದ 'ತಾರಿಣಿ' ಸಿನಿಮಾ ಬಿಡುಗಡೆಗೂ ಮುನ್ನವೇ ಗಮನ ಸೆಳೆಯತ್ತಿದೆ. ಇದೀಗ ಅಯೋಧ್ಯೆಯಲ್ಲಿ ನಡೆಯುವ ಪ್ರತಿಷ್ಟಿತ 'ಅಯೋಧ್ಯೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ನಲ್ಲಿ 'ತಾರಿಣಿ' ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು 'ಅತ್ಯುತ್ತಮ ಸಾಮಾಜಿಕ ಚಿತ್ರ' ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿದ್ದು ಪೂರ್ಣಚಂದ್ರ ಅವರು ನಿರ್ದೇಶನ ಮಾಡಿದ್ದಾರೆ.
ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರ ಆಗಿರುವುದರಿಂದ ನಾಯಕಿ ಮಮತಾ ರಾಹುತ್ ಅವರು ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಂತೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ರವರ ಮಗುವಿನ ದೃಶ್ಯಗಳು 'ತಾರಿಣಿ' ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ 'ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ಸ್', 'ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್', 'ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್', 'ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್', 'ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್', 'ಬಾಲಿವುಡ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ನಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆಯುವ 'ವಿಂಧ್ಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್', 'ರಾಜಸ್ಥಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ನಲ್ಲೂ ಈ ಚಿತ್ರ ಆಯ್ಕೆಯಾಗಿ ಮುಂದಿನ ವಾರ ಪ್ರದರ್ಶನಕ್ಕೆ ರೆಡಿಯಾಗಿದೆ. ಫ್ರಾನ್ಸ್ನ 'ಗೋಲ್ಡ್ ಫ್ಲಾಷ್' ಇಂಟರ್‌ನ್ಯಾಷನಲ್ ಫೆಸ್ಟಿವಲ್ನಲ್ಲಿ ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಉಳಿದಂತೆ ಇನ್ನೂ ಹಲವಾರು ಚಿತ್ರೋತ್ಸವಗಳಿಗೆ 'ತಾರಿಣಿ' ಚಿತ್ರವನ್ನು ಕಳುಹಿಸಲಾಗಿದೆ. ಎಲ್ಲ ಕಡೆಯಲ್ಲೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.