ತನುಜಾ ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿರೋ ಚಿತ್ರ. ಇಡೀ ದೇಶವೇ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆಯುತ್ತಾರೆ. ಆಕೆ ಪರೀಕ್ಷೆ ಬರೆಯಲು ಮುಖ್ಯ ಕಾರಣ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಅವರು ಹಾಗೂ ಪ್ರದೀಪ್ ಈಶ್ವರ್. ಇವರೆಲ್ಲರ ಸಹಾಯದಿಂದ ತನುಜಾ ನೀಟ್ ಪರೀಕ್ಷೆ ಬರೆದು, ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ.
ಈ ವಿಷಯವನ್ನಿಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ ಚಿತ್ರ ಮಾಡಿದ್ದಾರೆ. ಈ ಚಿತ್ರದ ಟ್ರೈಲರನ್ನು ವೈದ್ಯಕೀಯ ಸಚಿವರಾದ ಸುಧಾಕರ್ ಬಿಡುಗಡೆ ಮಾಡಿದರು. ಪತ್ರಕರ್ತ ವಿಶ್ವೇಶ್ವರ ಭಟ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸುಧಾಕರ್, ನಾನು ಸಮಾನ್ಯವಾಗಿ ಎಲ್ಲರ ಟ್ವಿಟ್ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವಿಟ್ ಮಾಡಿದ್ದನ್ನು ಗಮನಿಸಿ, ಆ ಹುಡುಗಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರವಂತೂ ಅಪಾರ ಎಂದು ಸ್ಮರಿಸಿದರು.
ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ, ತನುಜಾ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ ಎಂದರು. ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದು ಕೇಳಿಕೊಂಡರು. ಡಾಕ್ಟರ್ ಆಗಿರುವ ನನ್ನನ್ನು ಆ್ಯಕ್ಟರ್ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆ ತನುಜಾ ಅಂದುಕೊಂಡಿದ್ದನ್ನು ಸಾಧಿಸಿ ವೈದ್ಯೆ ಆಗುತ್ತಿದ್ದಾಳೆ. ತನುಜಾ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಸಚಿವ ಸುಧಾಕರ್ ಹಾರೈಸಿದರು.
ನನ್ನ ಪರಿಚಯದವರೊಬ್ಬರಿಂದ ಕೋವಿಡ್ ಸಮಯದಲ್ಲಿ ತನುಜಾ ಪರೀಕ್ಷೆ ಬರೆಯಲು ಮುಂದಾಗಿರುವ ವಿಷಯ ತಿಳಿಯಿತು. ತಕ್ಷಣ ನಾನು ಈ ವಿಷಯದ ಕುರಿತು ಟ್ವಿಟ್ ಮಾಡಿದೆ. ತನುಜಾ ತಾಯಿ ಸಹ ನನಗೆ ಫೋನ್ ಮಾಡಿ ಮಗಳು ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಕೇಳಿಕೊಂಡರು. ನನ್ನ ಟ್ವಿಟ್ಗೆ ಕೊರೋನದಂತಹ ಕಷ್ಟ ಸಮಯದಲ್ಲಿ, ಅದರಲ್ಲೂ ಅವರೇ ಆರೋಗ್ಯ ಸಚಿವರಾಗಿ ಸಾಕಷ್ಟು ಒತ್ತಡವಿದ್ದರೂ ನನ್ನ ಮನವಿಗೆ ಸ್ಪಂದಿಸಿ ತನುಜಾ ನೀಟ್ ಪರೀಕ್ಷೆ ಬರೆಯಲು ಸುಧಾಕರ್ ಸಹಾಯ ಮಾಡಿದರು.