ತಮನ್ನಾ ಭಾಟಿಯಾ ಸದಾ ಸಖತ್ ಸುದ್ದಿಯಲ್ಲಿರುವ ಬಹುಭಾಷಾ ನಟಿ. ಸಿನಿಮಾ ಸಾಧನೆ ಜೊತೆ ಜೊತೆಗೆ ಅದ್ಭುತ ಸೌಂದರ್ಯದ ಸಲುವಾಗಿ ಯಾವಾಗಲೂ ಜನರ ಚರ್ಚೆಯ ವಿಷಯವಾಗಿ ಉಳಿದು ಬಿಡುತ್ತಾರೆ. ಈ ನಟಿಮಣಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳಿಗಾಗಿ ಅತಿ ಹೆಚ್ಚು ಆಕರ್ಷಣೀಯ ಫೋಟೋಗಳನ್ನು ಹಂಚಿಕೊಳ್ಳುವ ಅಭಿನೇತ್ರಿ, ಆಗಾಗ್ಗೆ ಅವರೊಟ್ಟಿಗೆ ಸಂವಾದ ಕೂಡ ನಡೆಸುತ್ತಾರೆ.
ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ: ಮಂಗಳವಾರದಂದು ನಟಿ ತಮನ್ನಾ ಭಾಟಿಯಾ ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಭಿಮಾನಿಗಳನ್ನು ವರ್ಚುಯಲ್ ವೇದಿಕೆಯಲ್ಲಿ ಭೇಟಿ ಮಾಡಲು ಹಾಲ್ಗೆನ್ನೆ ಚೆಲುವೆ 'Asks Away' ಸೆಷನ್ ನಡೆಸಿದರು. ಅಭಿಮಾನಿಗಳ ಬಹುತೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೈಲರ್ ನಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಸ್ನಲ್ಲಿ, ಕೆಲ ವಿಶೇಷ ಪ್ರಶ್ನೋತ್ತರಗಳನ್ನು ಹಂಚಿಕೊಂಡಿದ್ದಾರೆ.
ತಮನ್ನಾ ಭಾಟಿಯಾ ದಕ್ಷಿಣ ಭಾರತದ ಭಕ್ಷ್ಯಗಳನ್ನು ಇಷ್ಟ ಪಡುತ್ತಾರೆ. ಕೆಲ ತಿಂಗಳ ಹಿಂದೆ ಬಾಳೆ ಎಲೆಯ ಮೇಲೆ ರುಚಿಕರವಾಗಿ ಕಾಣುವ ಆಹಾರದ ಫೋಟೋವನ್ನು ಹಂಚಿಕೊಂಡಿದ್ದರು. ಇದು ತಾವು ಸೇವಿಸಿದ ಅತ್ಯಂತ ರುಚಿಕರ ಆಹಾರ ಎಂದು ಹೇಳಿದ್ದರು. ಆಸ್ಕ್ ಅವೇ ಸೆಷನ್ನಲ್ಲಿ ಅಭಿಮಾನಿಯೊಬ್ಬರು ನಟಿ ಬಳಿ ನಿಮ್ಮ 'ಕಂಫರ್ಟ್ ಫುಡ್' ಯಾವುದೆಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ, 'ಖಿಚಡಿ, ಸಬ್ಜಿ ಮತ್ತು ಉಪ್ಪಿನಕಾಯಿ' ಎಂದು ತಿಳಿಸಿದ್ದಾರೆ.
ಅಭಿಮಾನಿಯೊಬ್ಬರು ಚೆನ್ನೈಗೆ ಯಾವಾಗ ಬರುತ್ತೀರ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ತಮನ್ನಾ, 'ಶೀಘ್ರದಲ್ಲೇ ಅಲ್ಲಿಗೆ ಬರಲು ಹೆಚ್ಚು ಕಾಯಲು ಸಾಧ್ಯವಿಲ್ಲ' ಎಂದಿದ್ದಾರೆ. 'ನೀವು ನಮ್ಮೆಲ್ಲರನ್ನು ಯಾವಾಗ ಭೇಟಿಯಾಗುತ್ತೀರಿ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಮಿಲ್ಕಿ ಬ್ಯೂಟಿ, ನಾನು ದೀಪಾವಳಿ ಪಾರ್ಟಿ ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.