ಸೌತ್ ಸಿನಿಮಾ ಇಂಡಸ್ಟ್ರಿಯ ಅಬ್ಬರಕ್ಕೆ ನಲುಗಿರುವ ಬಾಲಿವುಡ್ ವಿಭಿನ್ನ ಕಥೆಗಳನ್ನು ಜನರಿಗೆ ನೀಡುವ ಮೂಲಕ ಚೇತರಿಸಿಕೊಳ್ಳಲು ಮುಂದಾಗಿದೆ. ಮಹಿಳಾ ಪ್ರಧಾನ ಚಿತ್ರವೊಂದನ್ನು ನಿರ್ಮಿಸಲು ಬಾಲಿವುಡ್ ಸಿದ್ಧತೆ ನಡೆಸಿದೆ. 'The Crew' (ದಿ ಕ್ರ್ಯೂ, 'ಸಿಬ್ಬಂದಿ' ಈ ಪದದ ಅರ್ಥ) ಚಿತ್ರದ ಟೈಟಲ್.
2018ರಲ್ಲಿ 'ವೀರೇ ದಿ ವೆಡ್ಡಿಂಗ್' ಎಂಬ ಚಿತ್ರ ಬಂದಿತ್ತು. ಕರೀನಾ ಕಪೂರ್, ಸೋನಂ ಕಪೂರ್, ಸ್ವರಾ ಭಾಸ್ಕರ್ ಮತ್ತು ಶಿಕಾ ತಲ್ಸಾನಿಯಾ ಆ ಸಿನಿಮಾದ ತಾರಾ ಬಳಗ. ಈಗ ಅದೇ ಚಿತ್ರದ ನಿರ್ಮಾಪಕರಿಂದ ಇನ್ನೊಂದು ಹೊಸ ಚಿತ್ರ ಬರಲಿದ್ದು, ಇದರಲ್ಲಿ ನಟಿ ಟಬು, ಕರೀನಾ ಕಪೂರ್ ಮತ್ತು ಕೃತಿ ಸನೋನ್ ಒಟ್ಟಿಗೆ ಅಭಿನಯಿಸಲಿದ್ದಾರೆ. 'ದಿ ಕ್ರ್ಯೂ' ಚಿತ್ರೀಕರಣ 2023ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ವರ್ಷವೇ ಚಿತ್ರ ಬಿಡುಗಡೆಯಾಗಲಿದೆ. ರಾಜೇಶ್ ಕೃಷ್ಣನ್ ನಿರ್ದೇಶನವಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಪ್ರೊಡಕ್ಷನ್ಸ್‌ನ ಸಹ ನಿರ್ಮಾಕಪರು.
ಇತ್ತೀಚೆಗೆ ನಟಿ ಕರೀನಾ ಕಪೂರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು 'ದಿ ಕ್ರ್ಯೂ' ಬಗ್ಗೆ ಕೆಲ ಮಾಹಿತಿ ಹಂಚಿಕೊಂಡರು. 'ವೀರೇ ದಿ ವೆಡ್ಡಿಂಗ್' ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಿರ್ಮಾಪಕರಾದ ರಿಯಾ ಮತ್ತು ಏಕ್ತಾ ಅವರೊಂದಿಗೆ ಕೆಲಸ ಮಾಡುವುದು ಬಹಳ ಖುಷಿಯ ವಿಚಾರ. ಇದೀಗ ಮತ್ತೊಮ್ಮೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ರಿಯಾ ಅವರು ತಮ್ಮ ಹೊಸ ಯೋಜನೆಯಾದ 'ದಿ ಕ್ರ್ಯೂ'ನೊಂದಿಗೆ ನನ್ನ ಬಳಿಗೆ ಬಂದಾಗ ನಾನು ಸಾಕಷ್ಟು ಕುತೂಹಲದಿಂದ ಕೇಳಿದೆ. ಟಬು ಮತ್ತು ಕೃತಿ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿರುವುದು ಖುಷಿಯ ವಿಚಾರ. ನಾನು ಈ ಯೋಜನೆಯನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.