ಮುಂಬೈ: ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಖ್ಯಾತಿಯ ನಟ ಸುನೀಲ್ ಹೋಲ್ಕರ್ ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಲಿವರ್ ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸುನೀಲ್ ತಮ್ಮ ನಲವತ್ತನೇ ವಯಸ್ಸಿಗೆ ಜೀವನದ ಪಯಣವನ್ನ ಮುಗಿಸಿದ್ದು, ತಾಯಿ, ತಂದೆ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಿನಿಮಾ, ಟಿವಿ ಶೋ, ನಾಟಕ ಮೂಲಕ ಖ್ಯಾತಿ ಪಡೆದಿದ್ದ ಸುನೀಲ್, ಕೊನೆಯದಾಗಿ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ಗೋಸ್ಟ್ ಏಕ ಪೈಥಾನಿಚಿ'ಯಲ್ಲಿ ಕಾಣಿಸಿಕೊಂಡಿದ್ದರು.
ಹಾಸ್ಯ ರಂಗಕ್ಕೆ ಹೆಸರುವಾಸಿಯಾಗಿರುವ ಸುನೀಲ್ ಅವರು ಹಿಂದಿಯಲ್ಲಿ ಮಾತ್ರವಲ್ಲದೇ ಮರಾಠಿ ಚಿತ್ರಗಳಾದ ತುಮ್ಚ್ಯಾಸತಿ ಕೇ ಪಾನ್, ಸಗ್ಲಾ ಕರುಣ್ ಭಾಗ್ಲೆ, ಲೌ ಕಾ ಲಾಥ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಸುದೀರ್ಘವಾಗಿ 12 ವರ್ಷಗಳ ಕಾಲ ಹಾಸ್ಯ ರಂಗದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಟಿವಿ ಶೋಗಳನ್ನು ಹೊರತು ಪಡಿಸಿ ನಟ ಸುನೀಲ್ ಹೋಲ್ಕರ್ ಅವರು ರಂಗಭೂಮಿಯಲ್ಲೂ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರು ಅಶೋಕ್ ಹಂದೆಯವರ ಚೌರಂಗ್ ನಾಟ್ಯ ಸಂಸ್ಥಾನದಲ್ಲಿಯೂ ಕೆಲಸ ಮಾಡಿದ್ದರು.
ಸಾವಿನ ಬಗ್ಗೆ ಮೊದಲೇ ಅರಿತಿದ್ದ ಸುನೀಲ್: ಇನ್ನೂ ತಮ್ಮ ಸಾವಿನ ಬಗ್ಗೆ ಮೊದಲೇ ಅರಿತಿದ್ದ ಸುನೀಲ್, ಅವರ ಸ್ನೇಹಿತರೊಬ್ಬರ ಸಹಾಯದಿಂದ ತಮ್ಮ ವಾಟ್ಸ್ಆ್ಯಪ್ಗೆ ಸ್ಟೇಟಸ್ ಹಾಕುವಂತೆ ಕೋರಿ, ಸ್ಟೇಟಸ್ ಅಲ್ಲಿ ತಮ್ಮ ಕೊನೆಯ ಪೋಸ್ಟ್ ಎಂದು ಬರೆದು ತಮ್ಮನ್ನು ಬೆಂಬಲಿಸಿದರಿಗೆ ಧನ್ಯವಾದ ತಿಳಿಸಿ, ತಮ್ಮ ತಪ್ಪುಗಳಿಗೆ ಕ್ಷಮೆ ಇರಲಿ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಇದಕ್ಕೂ ಮುನ್ನ 'ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ'ದಲ್ಲಿ ನಟ್ಟು ಕಾಕಾ ಪಾತ್ರದಲ್ಲಿ ನಟಿಸಿದ್ದ ಘನಶ್ಯಾಮ್ ನಾಯಕ್ ಅವರು 76ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ನಟ್ಟು ಕಾಕಾ ಅಲಿಯಾಸ್ ಘನಶ್ಯಾಮ್ ಕ್ಯಾನ್ಸರ್ನೊಂದಿಗೆ ದೀರ್ಘಕಾಲದ ಹೋರಾಟ ನಡೆಸಿ 76ನೇ ವಯಸ್ಸಿಗೆ ನಿಧನ ಹೊಂದಿದ್ದರು. ನಟ್ಟು ಕಾಕಾ ಸಾವಿಗೆ ನಿರ್ಮಾಪಕ ಅಸಿತ್ ಮೋದಿ ಸೇರಿದಂತೆ ಅಭಿಮಾಗಳು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದರು. ಅಲ್ಲದೇ ಪ್ರಧಾನಿ ಮೋದಿ ಅವರು ಕೂಡ ಟ್ವಿಟರ್‌ನಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.