ವಿವಾದಗಳಿಂದಲೇ ಸದ್ದು ಮಾಡುವ ಶೋ ಅಂದ್ರೆ ಅದು "ಕಾಫಿ ವಿತ್ ಕರಣ್". ಇದನ್ನು ನಡೆಸುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಬರುವ ನಟ, ನಟಿಯರ ವೈಯಕ್ತಿಕ ಜೀವನ, ಲೈಂಗಿಕ ಆಸಕ್ತಿ ಬಗ್ಗೆ ಪ್ರಶ್ನೆ ಕೇಳಿ ಮುಜುಗರ ಉಂಟು ಮಾಡುತ್ತಾರೆ. ಜೊತೆಗೆ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಸುದ್ದಿ ಮಾಡುವುದು ಕರಣ್ರ ಹಳೆಯ ಚಾಳಿ.
ಹೊಸದಾಗಿ ಆರಂಭವಾಗಿರುವ ಕಾಫಿ ವಿತ್ ಕರಣ್ 7ನೇ ಚರಣದಲ್ಲಿಯೂ ಹಳೆಯ ಚಾಳಿ ಮುಂದುವರಿಸಿರುವ ಬಾಲಿವುಡ್ ನಿರ್ಮಾಪಕ ಟೀಕೆಗೆ ಗುರಿಯಾಗಿದ್ದಾರೆ. ಶೋಗೆ ಬಂದ ನಟ ಅಮೀರ್ ಖಾನ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕರಣ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೋಬಾರಾ ಸಿನಿಮಾ ಪ್ರಚಾರದ ವೇಳೆ ಬಾಲಿವುಡ್ ನಟಿ ತಾಪ್ಸಿ ಪನ್ನು ಕರಣ್ ಶೋಗೆ ನಿಮ್ಮನ್ನು ಏಕೆ ಆಹ್ವಾನಿಸಿಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ನಟಿ ಇದಕ್ಕೆ ಉತ್ತರವಾಗಿ "ನನ್ನ ಸೆಕ್ಸ್ ಲೈಫ್ ಕರಣ್ಗೆ ಆಹ್ವಾನಿಸುವಷ್ಟು ಆಸಕ್ತಿದಾಯಕವಾಗಿಲ್ಲ" ಎಂದು ಹೇಳಿದ್ದಾರೆ.