ನನ್ನನ್ನು ಪ್ರಶ್ನೆ ಕೇಳುವ ಮೊದಲು ನೀವು ನಿಮ್ಮ ಮನೆಯ ಕೆಲಸಗಳನ್ನು ಮಾಡಿ ಎಂದು ನಟಿ ತಾಪ್ಸಿ ಪನ್ನು ಮಾಧ್ಯಮದವರೊಂದಿಗೆ ವಾಗ್ವಾದ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ನಡೆದ OTT ಪ್ಲೇ ಅವಾರ್ಡ್ಸ್ 2022 ರಲ್ಲಿ ಭಾಗವಹಿಸಿದ್ದ ತಾಪ್ಸೀ ಪನ್ನು ವರದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಖಾರವಾಗಿ ಉತ್ತರಿಸಿದ್ದಾರೆ. ನಟಿ ಮತ್ತು ವರದಿಗಾರರ ನಡುವೆ ನಡೆದ ವಾಗ್ವಾದ ಸದ್ಯ ಜಾಲತಾಣದಲ್ಲಿ ಜಾಗ ಪಡೆದಿದೆ.
ಮಾಧ್ಯಮ ಸಂವಾದದಲ್ಲಿ ಅವರ ನಟನೆಯ ದೋಬಾರಾ ಚಿತ್ರದ ಬಗ್ಗೆ ಕೇಳಿ ಬಂದ ಬಾಯ್ಕಾಟ್ ಮತ್ತು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಸಹನೆ ಮೀರಿದ ನಟಿ ತಾಪ್ಸಿ ಪನ್ನು, ನೆಗೆಟಿವ್ ಟಾಕ್ ಯಾವ ಚಿತ್ರ ಎದುರಿಸಿಲ್ಲ ಎಂದು ವರದಿಗಾರ್ತಿಗೆ ಮರು ಪ್ರಶ್ನೆ ಹಾಕಿದರು. ಇದನ್ನೂ ಪಕ್ಕಕಿಟ್ಟ ಆ ವರದಿಗಾರ್ತಿ ಬೇರೆ ಪ್ರಶ್ನೆ ಕೇಳಲು ಪ್ರಯತ್ನಿಸಿದರು. ಆದರೆ, ಅದಕ್ಕೆ ಅಡ್ಡಿಪಡಿಸಿದ ತಾಪ್ಸಿ, ನೀವು ಮೊದಲು ನನ್ನ ಪ್ರಶ್ನೆಗೆ ಉತ್ತರಿಸಿ ಆಮೇಲೆ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಪಟ್ಟು ಹಿಡಿದರು.
ಯಾವ ಸಿನಿಮಾ ನೆಗೆಟಿವ್ ಟಾಕ್ ಎದುರಿಸಿಲ್ಲ ಹೇಳಿ ಎಂದು ಮತ್ತೆ ಮತ್ತೆ ಒತ್ತಿ ಕೇಳಿದರು. ಪೆಹೆಲೆ ಆಪ್ ಮೇರೆ ಬಾತ್ ಕಾ ಜವಾಬ್ ದೀಜಿಯೇ ಬಾದ್ ಆಪ್ಕೆ ಸವಾಲ್ ಕಾ ಜವಾಬ್ ದೇ ಡುಂಗಾ ಎಂದರು. ವಿಮರ್ಶಕರು ಕೂಡ ನಿಮ್ಮ ದೋಬಾರಾ ಸಿನಿಮಾ ವಿರುದ್ಧ ನಕಾರಾತ್ಮಕ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದರು. ಆಗ ಸಹನೆ ಕಳೆದುಕೊಂಡ ತಾಪ್ಸಿ, ಮೊದಲು ಅವರು ಅವರ ಮನೆ ಕೆಲಸವನ್ನು ಮಾಡಲು ಕೇಳಿ. ಯಾವುದೇ ಪ್ರಶ್ನೆಯನ್ನು ಕೇಳುವ ಮೊದಲು ದಯವಿಟ್ಟು ನಿಮ್ಮ ಮನೆ ಕೆಲಸದತ್ತ ಗಮನ ಕೊಡಿ ಎಂದು ಗರಂ ಆದರು.
ಮಾತು ಮುಂದುವರೆಸಿದ ಅವರು, ಈ ರೀತಿ ಹೇಳಿಕೆ ನೀಡುವುದರಿಂದ ಈ ನಟ - ನಟಿಯರಿಗೆ ಶಿಷ್ಟಾಚಾರ ಗೊತ್ತಿಲ್ಲ, ಸಂಸ್ಕೃತಿ ಗೊತ್ತಿಲ್ಲ ಎಂದು ಕೂಗಬೇಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಶ್ನೆ ಮಾಡುವವರಿಗೆ ಟಾಂಗ್ ನೀಡಿದರು. ಬಳಿಕ ವರದಿಗಾರ್ತಿ ಸಾರಿ ಸರ್! ಎಂದು ಕೇಳಿಕೊಂಡರು.