ತಾಪ್ಸಿ ಪನ್ನು ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲೋರ್ವರು. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಇವರು ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿ. ಇವರ ನಿರ್ಮಾಣದ ಎರಡನೇ ಚಿತ್ರ 'ಧಕ್ ಧಕ್' ಇಂದು ತೆರೆಕಂಡಿದೆ. "ಕಂಟೆಂಟ್ ಈಸ್ ಕಿಂಗ್" ಎಂಬ ಚಿತ್ರರಂಗದ ನಂಬಿಕೆಯ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ-ನಿರ್ಮಾಪಕಿ ತಾಪ್ಸಿ ಪನ್ನು, ''ಸಿನಿಮಾ ಇಂಡಸ್ಟ್ರಿಯಲ್ಲಿರುವವರ ಪೈಕಿ ಹೆಚ್ಚಿನವರು ಕಥೆಯ ಸಾರವನ್ನು ಅರ್ಥಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಸಿನಿಮಾದ "ನಾಯಕ ಯಾರು" ಎಂಬುದನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸುತ್ತಾರೆ. ಈ ಸ್ಟಾರ್ ಪವರ್ ಸಾಮಾನ್ಯವಾಗಿ ಚಿತ್ರದ ಪ್ರಮಾಣವನ್ನು ನಿರ್ಧರಿಸುತ್ತದೆ. ಆದ್ರೆ ನನ್ನ ವೃತ್ತಿಜೀವನದಲ್ಲಿ ಸಿನಿಮಾಗೆ ಒಪ್ಪಿಗೆ ಕೊಡುವ ಸಂದರ್ಭದಲ್ಲಿ ತನ್ನ ಸಹ ನಟರು ಅಥವಾ ನಿರ್ಮಾಣ ಸಂಸ್ಥೆಗೆ ಎಂದಿಗೂ ಆದ್ಯತೆ ನೀಡಲಿಲ್ಲ. ಹೊಸಬರೊಂದಿಗೆ ಕೆಲಸ ಮಾಡಿದ್ದೇನೆ'' ಎಂದು ತಿಳಿಸಿದರು. ಸ್ಟಾರ್ ಸಿಸ್ಟಮ್ ಸಣ್ಣ ಸಿನಿಮಾಗಳು ಮತ್ತು ಅರ್ಥಪೂರ್ಣ ಸಿನಿಮಾಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
"ಕಂಟೆಂಟ್ ಈಸ್ ಕಿಂಗ್" ಎಂದು ಜನ (ಉದ್ಯಮದವರು, ಪ್ರೇಕ್ಷಕರು) ಹೇಳುತ್ತಾರೆಂಬ ನನ್ನ ನಂಬಿಕೆ ಈ ಸಿನಿಮಾ ಮಾಡುವಾಗ ಛಿದ್ರವಾಯಿತು. ತಪ್ಪು ನಂಬಿಕೆಗಳು ಬಹಳ ಇವೆ. ನಿಮ್ಮ ಒನ್ ಲೈನ್ ಸ್ಟೋರಿ ಕೇಳುತ್ತಾರೆ, ಬಳಿಕ ಚಿತ್ರದಲ್ಲಿ ನಾಯಕ ಯಾರು ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ಉತ್ತರ, ಆ ಪ್ರಾಜೆಕ್ಟ್‌ನಲ್ಲಿ ಅವರ ಆರ್ಥಿಕ ಮತ್ತು ಭಾವನಾತ್ಮಕ ಹೂಡಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ. ಓರ್ವ ನಟಿಯಾಗಿ, ನಾನು ಸಿನಿಮಾಗೆ ಸಹಿ ಹಾಕುವಾಗ ನನ್ನ ಸಹ ನಟ ಯಾರು ಅಥವಾ ನಿರ್ಮಾಪಕರು ಎಷ್ಟು ದೊಡ್ಡವರು ಎಂಬುದರ ಬಗ್ಗೆ ಎಂದಿಗೂ ಕೇಳಲಿಲ್ಲ. ನಾನು ಚೊಚ್ಚಲ ನಿರ್ದೇಶಕರು ಮತ್ತು ಹೊಸ ಸಹ ನಟರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇತರರು (ಚಿತ್ರರಂಗದವರು) ಕೂಡ ಹಾಗೇ ನೋಡುವುದಿಲ್ಲ" - ತಾಪ್ಸಿ ಪನ್ನು.