ಮಾಜಿ ವಿಶ್ವಸುಂದರಿ, ಹಿಂದಿ ಚಿತ್ರರಂಗದ ಜನಪ್ರಿಯ, ಹಿರಿಯ, ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಅವರು ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದ್ದಾರೆ. ಅನಾರೋಗ್ಯಕ್ಕೊಳಗಾಗಿದ್ದ ಅವರು ಚೇತರಿಸಿಕೊಂಡು ತಮ್ಮ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಆರೋಗ್ಯ, ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆಯಾಗಿ ಸುಶ್ಮಿತಾ: ಬಾಲಿವುಡ್ ಟಾಪ್ ನಟಿ ಸುಶ್ಮಿತಾ ಸೇನ್ ಅವರ ಮುಂಬರುವ ಬಹುನಿರೀಕ್ಷಿತ ಪ್ರೊಜೆಕ್ಟ್ 'ತಾಲಿ'. ಈ ಚಿತ್ರದಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಸ್ ತಯಾರಕರು ಶುಕ್ರವಾರದಂದು ಸರಣಿಯ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಇದರಲ್ಲಿ ಸುಶ್ಮಿತಾ ಸೇನ್ ಅವರನ್ನು ಹೊಸ ಅವತಾರದಲ್ಲಿ ತೋರಿಸಲಾಗಿದೆ.
'ಚಪ್ಪಾಳೆ ಹೊಡೆಯಲ್ಲ, ಹೊಡೆಸುತ್ತೇವೆ': ಜಿಯೋ ಸಿನಿಮಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ಗೌರಿ / ಸುಶ್ಮಿತಾ ಸೇನ್ ಅವರ ಆಸಕ್ತಿದಾಯಕ ನೋಟವನ್ನು ಒಳಗೊಂಡಿತ್ತು. ಟ್ರಾನ್ಸ್‌ಜೆಂಡರ್ ವ್ಯಕ್ತಿಯಾಗಿ ಅವರ ಪಾತ್ರ ಹೆಚ್ಚು ಹೆಮ್ಮೆ ಮತ್ತು ಶೌರ್ಯದಾಯಕವಾಗಿ ಇರಲಿದೆ. ಮೋಷನ್ ಪೋಸ್ಟರ್ ಹಂಚಿಕೊಂಡ ಸುಶ್ಮಿತಾ ಸೇನ್ 'ಚಪ್ಪಾಳೆ ಹೊಡೆಯಲ್ಲ, ಹೊಡೆಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
'ಆರ್ಯ ಸೀಸನ್ 3'ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ:'ತಾಲಿ' ಸೀರಿಸ್ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್ ಅವರ ಜೀವನಚರಿತ್ರೆಯಾಗಿದ್ದು. ಇದರಲ್ಲಿ ಸುಶ್ಮಿತಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸರಣಿಯ ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ. ನಿಶಾಂದರ್ ಅವರ ಈ ಬಯೋಪಿಕ್ ಅನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶಿಸಿದ್ದಾರೆ. ಅರ್ಜುನ್ ಸಿಂಗ್ ಬರನ್, ಕಾರ್ತಿಕ್ ಡಿ. ನಿಶಾಂದರ್ ಮತ್ತು ಅಫೀಫಾ ನಾಡಿಯಾಡ್ವಾಲ್ ನಿರ್ಮಿಸಿದ್ದಾರೆ. ಈ ಯೋಜನೆಯ ಹೊರತಾಗಿ, ಸುಶ್ಮಿತಾ ಡಿಸ್ನಿ+ಹಾಟ್‌ಸ್ಟಾರ್‌ನ 'ಆರ್ಯ ಸೀಸನ್ 3' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.