ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಟ್ವಿಟರ್‌ನಲ್ಲಿ AskSRK ಸೆಷನ್ ನಡೆಸಿದ ನಂತರ ನಡೆದ ವಿದ್ಯಮಾನವೊಂದರಿಂದ ಆಶ್ಚರ್ಯಚಕಿತರಾದರು. ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಶಾರುಖ್ ಖಾನ್ AskSRK ಸೆಷನ್ ನಡೆಸೋದು ನಿಮಗೆಲ್ಲರಿಗೂ ತಿಳಿದೇ ಇದೆ. ಇದರಲ್ಲಿ ಅಭಿಮಾನಿಗಳ ಬಹುತೇಕ ಪ್ರಶ್ನೆಗಳಿಗೆ ಅವರು ಉತ್ತರ ಕೊಡುತ್ತಾರೆ. ಅದರಂತೆ ಸೋಮವಾರ AskSRK ಸೆಷನ್ ನಡೆಸಿದ್ದು, ಆಹಾರ ವಿತರಣಾ ಅಪ್ಲಿಕೇಶನ್ Swiggy ಇಂಡಿಯನ್ ಸೂಪರ್ ಸ್ಟಾರ್ಗೆ ಸರ್ಪ್ರೈಸ್ ಕೊಟ್ಟಿದೆ.
ಟ್ವಿಟರ್ ಪ್ರಶ್ನೋತ್ತರ ಅವಧಿಯಲ್ಲಿ, ಪ್ರಪಂಚಾದ್ಯಂತ ಅಭಿಮಾನಿಗಳು ಶಾರುಖ್ ಖಾನ್ ಅವರ ಚಲನಚಿತ್ರಗಳು, ಕುಟುಂಬ ಮತ್ತು ದೈನಂದಿನ ವಿಚಾರ ಸೇರಿದಂತೆ ವಿವಿಧ ವಿಷಯಗಳ ಮೇಲೆ ನಟನಿಗೆ ಪ್ರಶ್ನೆಗಳ ಮಳೆಗೈದರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಎಸ್‌ಆರ್‌ಕೆ ಪ್ರಸಿದ್ಧ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಅಭಿಮಾನಿಯೋರ್ವರು, 'ಊಟ ಆಯ್ತಾ ಅಣ್ಣ' ಎಂದು ಶಾರುಖ್ ಅವರಲ್ಲಿ ಪ್ರಶ್ನೆ ಮಾಡಿದ್ದಾರೆ. ಬುದ್ಧಿವಂತಿಕೆ ಮತ್ತು ಹಾಸ್ಯಭರಿತ ಪ್ರತಿಕ್ರಿಯೆಗೆ ಹೆಸರಾದ ಎಸ್‌ಆರ್‌ಕೆ, ''ಏಕೆ, ನೀವು ಸ್ವಿಗ್ಗಿ ಅವರೇ, ನನಗೆ ಆಹಾರ ತಲುಪಿಸುತ್ತೀರಾ?'' ಎಂದು ಕೇಳಿದ್ದಾರೆ. ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ನೇರವಾಗಿ ಸಂಭಾಷಣೆಗೆ ಧುಮುಕಿತು. ಶಾರುಖ್ಗೆ ಏನು ಬೇಕು ಎಂದು ಆಫರ್ ಕೂಡ ಇಟ್ಟಿತು. ಕೆಲವೇ ಗಂಟೆಗಳಲ್ಲಿ ಸ್ವಿಗ್ಗಿ ಸಿಬ್ಬಂದಿಯ ಗುಂಪು ಮನ್ನತ್ ಎದುರು ಕಾಣಿಸಿಕೊಂಡಿತು. 'ಅವರು ಭೋಜನದೊಂದಿಗೆ ಆಗಮಿಸಿದ್ದಾರೆ' ಎಂದು ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಶಾರುಖ್ ಅವರ ಬಂಗಲೆಯ ಹೊರಗಿನ ಚಿತ್ರವನ್ನು ಹಂಚಿಕೊಂಡ ಸ್ವಿಗ್ಗಿ ಸಂಸ್ಥೆ, "ನಾವು ಸ್ವಿಗ್ಗಿ ಜನರು ಮತ್ತು ನಾವು ರಾತ್ರಿಯ ಊಟದೊಂದಿಗೆ ಬಂದಿದ್ದೇವೆ" ಎಂದು ಬರೆದುಕೊಂಡಿದೆ.