ಇತ್ತೀಚೆಗಷ್ಟೇ ವೈವಾಹಿಕ ಜೀವನ ಆರಂಭಿಸಿರುವ ನಟಿ ಸ್ವರಾ ಭಾಸ್ಕರ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ತಾವು ಗರ್ಭಿಣಿಯಾಗಿರುವ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಶೇರ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇಂದು ಪತಿ ಫಹಾದ್ ಅಹ್ಮದ್ ಜೊತೆಗಿನ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಬೇಬಿ ಬಂಪ್ ಚಿತ್ರ ಇದಾಗಿದೆ. ಈ ಚಿತ್ರಗಳಲ್ಲಿ ಸ್ವರಾ ತಮ್ಮ ಪತಿಯ ಮಡಿಲಲ್ಲಿ ಕುಳಿತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಗಮನಾರ್ಹವಾಗಿ, ಸ್ವರಾ ಭಾಸ್ಕರ್ ಮೂರು ತಿಂಗಳ ಹಿಂದೆ ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ಕಾನೂನುಬದ್ಧವಾಗಿ ವಿವಾಹವಾದರು. ನಂತರ ಶಾಸ್ತ್ರ ಪ್ರಕಾರವಾಗಿ ಮದುವೆ ಆದ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಯೊಂದು ಚಿತ್ರವನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
'ಕೆಲವೊಮ್ಮೆ ಎಲ್ಲಾ ಪ್ರಾರ್ಥನೆಗಳು ಒಟ್ಟಿಗೆ ಉತ್ತರಿಸಲ್ಪಡುತ್ತವೆ. ನಾವು ಸಂಪೂರ್ಣ ಹೊಸ ಜಗತ್ತಿಗೆ ಕಾಲಿಡುತ್ತಿರುವ ಈ ವೇಳೆ ಆಶೀರ್ವಾದಿಸಲ್ಪಟ್ಟಿದ್ದೇವೆ, ಕೃತಜ್ಞರಾಗಿದ್ದೇವೆ, ಉತ್ಸುಕರಾಗಿದ್ದೇವೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಚಿತ್ರಗಳೊಂದಿಗೆ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹೊರ ಬೀಳುತ್ತಿದ್ದಂತೆ ದಂಪತಿಯ ಅಭಿಮಾನಿಗಳು,ನೆಟ್ಟಿಗರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ.
ನಟಿ ಸ್ವರಾ ಭಾಸ್ಕರ್ ಪೋಸ್ಟ್ಗೆ ನಾನಾ ರೀತಿಯಲ್ಲಿ ಸಂದೇಶ ಹರಿದು ಬರುತ್ತಿದೆ. ಹೆಚ್ಚಿನವರು 'ಅಭಿನಂದನೆಗಳು' ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಕಾಮೆಂಟ್ ಮಾಡಿ, 'ಮೊದಲು ಗರ್ಭಿಣಿ ನಂತರ ಶಾದಿ, ಬಾಲಿವುಡ್ನ ಹೊಸ ಟ್ರೆಂಡ್' ಎಂದು ಹೇಳಿದ್ದಾರೆ. 'ಮದುವೆ ಹಿಂದಿನ ಕಾರಣ' ಎಂದು ಮತ್ತೋರ್ವರು ಕಾಮೆಂಟ್ ಮಾಡಿದ್ದಾರೆ. ಉಳಿದಂತೆ ಹಲವರು ಹಾರ್ಟ್ ಎಮೋಜಿ ಬಳಸಿಕೊಂಡು 'ಅಭಿನಂದನೆಗಳು' ಎಂದು ಕಾಮೆಂಟ್ ಮಾಡುತ್ತಿದ್ದಾರೆ.