ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಜನವರಿ 6ರಂದು (ಗುರುವಾರ) ವಿಶೇಷ ವಿವಾಹ ಕಾಯ್ದೆಯಡಿ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಜೊತೆಗಿನ ಮದುವೆ ವಿಚಾರವನ್ನು ನಿನ್ನೆ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ನ್ಯಾಯಾಲಯದಲ್ಲಿ ಮದುವೆ ಆಗಿರುವ ದಂಪತಿ ಇದೀಗ ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದಾರೆ.
ಸ್ವರಾ ಭಾಸ್ಕರ್ ಟ್ವೀಟ್: ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸ್ವರಾ ಭಾಸ್ಕರ್ ಅವರು ಇಂದು ವಿಶೇಷ ವಿವಾಹ ಕಾಯ್ದೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ವಿಶೇಷ ವಿವಾಹ ಕಾಯ್ದೆ ಪ್ರೀತಿಗೆ ಅವಕಾಶ ನೀಡುತ್ತದೆ. ಪ್ರೀತಿ ಮತ್ತು ಜೀವನ ಸಂಗಾತಿಯನ್ನು ಮದುವೆಯಾಗುವ ಹಕ್ಕು 'ಸವಲತ್ತು' ಆಗಬಾರದು ಎಂದು ಕೂಡ ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ತಮ್ಮ ಮದುವೆಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಾರ್ಚ್‌ನಲ್ಲಿ ಅದ್ಧೂರಿ ವಿವಾಹ:ಮಾರ್ಚ್‌ನಲ್ಲಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ದಂಪತಿಯ ಅದ್ಧೂರಿ ವಿವಾಹ ಮಹೋತ್ಸವ ನಡೆಯಲಿದೆ. 'ಶೆಹನಾಯಿ-ವಾಲಿ ಶಾದಿ'ಗೆ ಸ್ವರಾ ಉತ್ಸುಕರಾಗಿದ್ದಾರೆ. ಅದ್ಧೂರಿ ಮದುವೆಗೆ ಈ ದಂಪತಿ ಮತ್ತು ಕುಟುಂಬಸ್ಥರು ಸದ್ಯಕ್ಕೆ ಯಾವುದೇ ಪ್ಲ್ಯಾನ್ ಮಾಡಿಲ್ಲ. ಆದ್ರೆ ಮಾರ್ಚ್‌ನಲ್ಲಿ ವಿವಾಹ ಮಹೋತ್ಸವ ನಡೆಸಲಿದ್ದಾರೆ.
34 ವರ್ಷದ ನಟಿ ಸ್ವರಾ ಭಾಸ್ಕರ್ ಮತ್ತು ರಾಜಕಾರಣಿ ಫಹಾದ್ ಅಹ್ಮದ್ ನಿನ್ನೆಯ ಮದುವೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ನೆಟ್ಟಿಗರು, ಅಭಿಮಾನಿಗಳು ಈ ನವದಂಪತಿಗೆ ಶುಭ ಕೋರಿದ್ದಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ದಂಪತಿಯನ್ನು ಟ್ರೋಲ್ ಮಾಡಿದ್ದಾರೆ. ಸ್ವರಾ ಅವರು ಫಹಾದ್ ಅವರನ್ನು "ಭಯ್ಯಾ" ಎಂದು ಕರೆದ ಟ್ವೀಟ್ ಒಂದನ್ನು ಕೆಲವರು ನೆನಪಿಸಿದ್ದಾರೆ.