ಬೆಂಗಳೂರು : ಅನಾಮಧೇಯ ಪತ್ರಗಳ ಮೂಲಕ ಕನ್ನಡದ ಹೆಸರಾಂತ ನಟ ಸುದೀಪ್ ಮತ್ತು ಅವರ ಕುಟುಂಬಸ್ಥರಿಗೆ ಯಾರೋ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಮಾರ್ಚ್ 10ರಂದು ಈ ಪತ್ರಗಳು ಬಂದಿದ್ದು, ನಟನ ಆಪ್ತ ಜಾಕ್ ಮಂಜು ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಕೇಸ ಅನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಿಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ತನಿಖೆ ಈಗ ಚುರುಕುಗೊಂಡಿದೆ.
ನಟ ಸುದೀಪ್ ಅವರಿಗೆ ಬಂದ ಬೆದರಿಕೆ ಪತ್ರಗಳ ಕುರಿತು ಸಿಸಿಬಿ ತನಿಖೆ ಆರಂಭಿಸಿದೆ. ಸಿಸಿಬಿ ಅಧಿಕಾರಿಗಳಿಗೆ ಅವರ ಮಾಜಿ ಕೆಲಸಗಾರರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಕಿಚ್ಚ ಸುದೀಪ್ ವಿರುದ್ಧ ನಡೆದಿತ್ತಾ ಕ್ರಿಮಿನಲ್ ಸಂಚು? ಒಂದು ಕಾಲದಲ್ಲಿ ಕಿಚ್ಚನ ಆಪ್ತ ವಲಯದಲ್ಲಿದ್ದವರಿಂದಲೇ ನಡೆಯಿತಾ ಈ ಸಂಚು? ಅನುಮಾನಗಳು ಕಾಡುತ್ತಿವೆ.
ಅವರ ಜತೆ ಕೆಲಸಕ್ಕಿದ್ದ ವ್ಯಕ್ತಿಯೊಬ್ಬನನ್ನು ಕೆಲ ಕಾರಣಗಳಿಂದ ನಟ ಸುದೀಪ್ ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಅದೇ ವ್ಯಕ್ತಿಯೇ ಈ ರೀತಿ ಬೆದರಿಕೆ ಪತ್ರ ಬರೆದಿರುವ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಅಥವಾ ಚಿತ್ರರಂಗದಲ್ಲಿರುವ ಕಿಚ್ಚನ ವಿರೋಧಿಗಳು ಅವರ ಮಾಜಿ ಕೆಲಸಗಾರನ ಮೂಲಕ ಷಡ್ಯಂತ್ರ ನಡೆಸಿರುವ ಸಾಧ್ಯತೆಯ ಆಯಾಮದಲ್ಲಿಯೂ ಪೊಲೀಸರ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ :''ಸುದೀಪ್ ಹೇಳಿಕೆಯಿಂದ ಆಘಾತವಾಗಿದೆ'': ನಟ ಪ್ರಕಾಶ್ ರಾಜ್
ಈ ಅನಾಮಧೇಯ ಪತ್ರದ ಕುರಿತು ಪ್ರತಿಕ್ರಿಯಿಸಿದ್ದ ಸುದೀಪ್, ಪ್ರಕರಣದ ಹಿಂದೆ ಸಿನಿರಂಗದವರ ಕೈವಾಡವಿದೆ ಎಂದು ನೇರವಾಗಿ ಹೇಳಿದ್ದರು. ಹಾಗಾಗಿ ಸುದೀಪ್ ಜೊತೆಯಲ್ಲಿದ್ದ ವ್ಯಕ್ತಿಯನ್ನೇ ಬಳಸಿಕೊಂಡು ಸಿನಿರಂಗದಲ್ಲಿರುವ ಅವರ ವಿರೋಧಿಗಳು ಈ ರೀತಿ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ. ಪೊಲೀಸರ ಶಂಕೆಗೆ ಪುಷ್ಠಿ ನೀಡುವಂತೆ ಕೆಲ ಪೂರಕ ಹಾಗೂ ಸಾಂದರ್ಭಿಕ ಸಾಕ್ಷಿಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರು ಹಾಗೂ ಸಿಸಿಬಿ ಪೊಲೀಸರ ತಂಡ ಕಿಚ್ಚನ ಮಾಜಿ ಕೆಲಸಗಾರನಿಗಾಗಿ ಹುಡುಕಾಟ ಆರಂಭಿಸಿದೆ.
ಇದನ್ನೂ ಓದಿ :ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ
ಇನ್ನು ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ನಟ ಸುದೀಪ್ ರಾಜಕೀಯ ಎಂಟ್ರಿ ವಿಚಾರಕ್ಕೂ ನಿನ್ನೆ ಸ್ಪಷ್ಟತೆ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಬಿಜೆಪಿ ಸೇರಲ್ಲ, ಆದರೆ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರ ಈ ಘೋಷಣೆ ಬಿಜೆಪಿಗೆ ಆನೆಬಲ ಬಂದಂತಾಗಿದ್ದು, ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ನಟ ಪ್ರಕಾಶ್ ರಾಜ್ ''ನಿಮ್ಮ ನಿರ್ಧಾರದಿಂದ ನೋವಾಗಿದೆ'' ಎಂದು ಅಸಮಾಧಾನ ಹೊರಹಾಕಿದ್ದಾರೆ.