ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅಭಿನಯದ 'ತಾಲಿ' ಬಹುನಿರೀಕ್ಷಿತ ವೆಬ್ ಸೀರಿಸ್. ನಿಜಜೀವನದ ಕಥೆಯನ್ನಾಧರಿಸಿರುವ 'ತಾಲಿ' ಬಿಡುಗಡೆಗೆ ಸಜ್ಜಾಗುತ್ತಿದೆ. 47ರ ಹರೆಯದ ಬಾಲಿವುಡ್ ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಅವರು ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂದು ಟೀಸರ್ ಅನಾವರಣಗೊಂಡಿದ್ದು, ತೃತೀಯಲಿಂಗಿಯರ ಪರಿಸ್ಥಿತಿಯನ್ನು ಚಿತ್ರಿಸಿದೆ.
ಸೀರೆ ಉಟ್ಟು, ಹಣೆಗೆ ದೊಡ್ಡ ಬಿಂದಿ ಇಟ್ಟು ನಟಿ ಸುಶ್ಮಿತಾ ಸೇನ್ ಅವರು ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳುವ ದೃಶ್ಯದೊಂದಿಗೆ ತಾಲಿ ಟೀಸರ್ ಆರಂಭಗೊಳ್ಳುತ್ತದೆ. ಪ್ರಸಿದ್ಧ ಗಾಯಕಿ ಉಷಾ ಉತುಪ್ ಅವರ ಭಾವಚಿತ್ರ ಸುಶ್ಮಿತಾ ಅವರ ವಾರ್ಡ್ ರೋಬ್ ಮೇಲೆ ಅಂಟಿಸಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ನಂತರ ತೃತೀಯಲಿಂಗಿ ಸಮುದಾಯದ ಸದಸ್ಯರು ಸುಶ್ಮಿತಾ ಅವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣ ಬಹುದಾಗಿದೆ..
ಶ್ರೀಗೌರಿ ಅಥವಾ ಗೌರಿ ಸಾವಂತ್ ( ಶ್ರೀಗೌರಿ ಸಾವಂತ್) ಪುಣೆಯ ತೃತೀಯಲಿಂಗಿ ಕಾರ್ಯಕರ್ತೆ. ಪೊಲೀಸ್ ಅಧಿಕಾರಿಯಾಗಿದ್ದ ತಮ್ಮ ತಂದೆಗೆ ನಿರಾಶೆಯಾಗುವುದನ್ನು ತಪ್ಪಿಸಲು ಸಾವಂತ್ ತಮ್ಮ ಹದಿಹರೆಯದಲ್ಲಿ ಮನೆಯಿಂದ ಹೊರ ಬರುತ್ತಾರೆ. ನಂತರ ಸಖಿ ಚಾರ್ ಚೌಘಿ ಟ್ರಸ್ಟ್ ( Sakhi Char Chowghi Trust) ನ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಇದು ತೃತೀಯಲಿಂಗಿ ಸಮುದಾಯಕ್ಕೆ ಕೌನ್ಸೆಲಿಂಗ್ ಸೇವೆ ಒದಗಿಸುವ ಮತ್ತು ಸುರಕ್ಷಿತ ಲೈಂಗಿಕತೆ ಉತ್ತೇಜಿಸುವ ಎನ್ಜಿಒ. ಟ್ರಾನ್ಸ್‌ಜೆಂಡರ್‌ಗಳ ಹಕ್ಕುಗಳನ್ನು ಬೆಂಬಲಿಸಿ 2014 ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಮೊದಲ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಇವರು. ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ ಅನ್ನು ಸಮಾಜದ ತೃತೀಯ ಲಿಂಗ ಎಂದು ಘೋಷಿಸಿದ ಮಹತ್ವದ ಪ್ರಕರಣದಲ್ಲಿ ಶ್ರೀಗೌರಿ ಸಾವಂತ್ ಮೊದಲ ಮತ್ತು ಪ್ರಮುಖ ಅರ್ಜಿದಾರರಾಗಿದ್ದರು.