ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ 'ಆರ್ಯ ಸೀಸನ್ 3'ರ ಚಿತ್ರೀಕರಣವನ್ನು ಇಂದು ರಾಜಸ್ಥಾನದ ಜೈಪುರದಲ್ಲಿ ಪುನರಾರಂಭಿಸಿದ್ದಾರೆ. ನಟಿಯ ಆರೋಗ್ಯದಲ್ಲಿ ಚೇತರಿಕೆಯನ್ನು ಖಚಿತಪಡಿಸಿಕೊಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅಲ್ಲದೇ ತಮ್ಮ ಮೆಚ್ಚಿನ ನಟಿಯನ್ನು ಶೀಘ್ರವೇ ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ.
ಆರ್ಯ ವೆಬ್ ಸೀರಿಸ್ನಲ್ಲಿ ನಟಿ ಸುಶ್ಮಿತಾ ಸೇನ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಆರ್ಯ ಸೀಸನ್ 3' ಸೆಟ್‌ಗೆ ಮರಳಿದ ಬಗ್ಗೆ ಮಾತನಾಡಿದ ಸುಶ್ಮಿತಾ, "ಆರ್ಯ ಶಕ್ತಿಗಾಗಿ ನಿಂತಿದ್ದಾಳೆ ಮತ್ತು ಅವಳ ಮನೋಭಾವ ಸದ್ಯ ನನ್ನ ಅವಿಭಾಜ್ಯ ಭಾಗವಾಗಿದೆ. ಆರ್ಯ ಜೊತೆಯಲ್ಲಿ, ನಾನು ಸಂಪೂರ್ಣ ಹೊಸ ಪ್ರದೇಶಕ್ಕೆ ಕಾಲಿಟ್ಟಿದ್ದೇನೆ. ನಾವು ಹಿಂದೆಂದೂ ಮಾಡದಿರುವುದನ್ನು ಪ್ರಯತ್ನಿಸುವ ಸಮಯ ಬಂದಿದೆ. ಆರ್ಯ ಮೂರನೇ ಅಧ್ಯಾಯದೊಂದಿಗೆ, ಪ್ರೇಕ್ಷಕರು ಅವಳನ್ನು ನೋಡುತ್ತಾರೆ. ನಿರ್ಭೀತ ತಾಯಿ, ಮಗಳು ಮತ್ತು ಮಹಿಳೆಯಾಗಿ ಸಂಪೂರ್ಣ ಆ್ಯಕ್ಷನ್ ಅವತಾರದಲ್ಲಿ ಬರಲಿದೆ. ನನ್ನ ಪಾತ್ರದ ಈ ಹೊಸ ಭಾಗಕ್ಕೆ ಧುಮುಕಲು ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.
'ಆರ್ಯ' ಸುಶ್ಮಿತಾ ಸೇನ್ ಅವರ ಪುನರಾಗಮನವನ್ನು ಗುರುತಿಸುತ್ತದೆ. ಇದು ಅವರ ಚೊಚ್ಚಲ ವೆಬ್ ಸೀರಿಸ್. 2020ರ ಜೂನ್ನಲ್ಲಿ 'ಆರ್ಯ' ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದರು. ಸದ್ಯ ಸೀಸನ್ 3 ಶೂಟಿಂಗ್ ಚುರುಕುಗೊಂಡಿದೆ. ಈ ಸರಣಿಯಲ್ಲಿ ನಟಿ ಕಠಿಣ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಾರೆ. ಪಾತ್ರಧಾರಿ ತಮ್ಮ ಕುಟುಂಬವನ್ನು ರಕ್ಷಿಸಲು ಪಣ ತೊಡುತ್ತಾರೆ. ಗಡಿಗಳನ್ನು ಮೀರಿ ಹೋಗುತ್ತಾರೆ. ಮೊದಲ ಸೀಸನ್ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ನಾಟಕ' ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು.