ಮಾಜಿ ವಿಶ್ವ ಸುಂದರಿ, ಬಾಲಿವುಡ್ ಬಹುಬೇಡಿಕೆ ತಾರೆ ಸುಶ್ಮಿತಾ ಸೇನ್ ಅವರ ಹಳೇ ವಿಡಿಯೋವೊಂದು ಆನ್ಲೈನ್ನಲ್ಲಿ ವೈರಲ್ ಆಗಿದೆ. ಸುಶ್ಮಿತಾರ ಸಾಧನೆಗಳನ್ನು ಮಾಜಿ ವಿಶ್ವ ಸುಂದರಿಯರಾದ ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ ಅವರ ಸಾಧನೆಗಳಿಗೆ ಹೋಲಿಸುವ ಪತ್ರಕರ್ತರ ಪ್ರಯತ್ನಕ್ಕೆ ಪ್ರತಿಕ್ರಿಯಿಸುತ್ತಿರುವ ವಿಡಿಯೋವದು. ಈ ವಿಡಿಯೋ ವೈರಲ್ ಆಗುತ್ತಿದ್ದು, ಯಶಸ್ಸಿನ ಸ್ವರೂಪದ ಕುರಿತು ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಡಿಯೋದ ಬಗ್ಗೆ ಇದೀಗ ಸುಶ್ಮಿತಾ ಸೇನ್ ಅವರು ಬಹಳ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ.
ಸುಶ್ಮಿತಾ ಸೇನ್ ಮುಖ್ಯಭೂಮಿಕೆಯ ಮುಂದಿನ ವೆಬ್ ಸೀರಿಸ್ ತಾಲಿ ಪ್ರಮೋಶನ್ ವೇಳೆ ಹಳೇ ಘಟನೆಯನ್ನು ಮೆಲುಕು ಹಾಕಿ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹಳೇ ವಿಡಿಯೋ ಬಗ್ಗೆ ಮಾತನಾಡಿದ ನಟಿ, ಪತ್ರಕರ್ತರ ಪ್ರಶ್ನೆಗೆ ದಿಗ್ಭ್ರಮೆಗೊಂಡೆ. ಆದರೆ ಆ ವೇಳೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸಿದೆ. ಆ ಪ್ರಶ್ನೆ ಅಗೌರವಯುತವಾಗಿತ್ತು. ಅಂತಹ ಪ್ರಶ್ನೆಗಳು ಏಕೆ ಅಗತ್ಯ? ಎಂದು ಪ್ರಶ್ನಿಸಿದರು. ಪ್ರಚೋದನಕಾರಿ ಪ್ರಶ್ನೆಗಳ ಹೊರತಾಗಿಯೂ ಸುಶ್ಮಿತಾ ಅವರು ದೃಢವಾಗಿ, ಸರಿಯಾಗಿ ಪ್ರತಿಕ್ರಿಯೆ ಕೊಡಲು ಮುಂದಾದರು.
ಇತರರ ಯಶಸ್ಸಿನ ಆಧಾರದ ಮೇರೆಗೆ ಓರ್ವರ ಸಾಧನೆಗಳನ್ನು ಮೌಲ್ಯಮಾಪನ ಮಾಡುವುದು ಸೂಕ್ತವಲ್ಲ. ಇತರರ ಸಾಧನೆಗಳನ್ನು ಹೋಲಿಕೆ ಮಾಡುವ ಬದಲು, ಅವರ ಸಾಧನೆಗಳ ಗಮನಾರ್ಹ ಅಂಶಗಳನ್ನು ಆಚರಿಸೋಣ ಎಂದು ಸಲಹೆಯಿತ್ತರು. ಅತ್ಯುತ್ತಮ ಸಾಧನೆಗಳನ್ನು ಎತ್ತಿ ಹಿಡಿಯೋಣ, ಏಕೆಂದರೆ ಅವು ಜಗತ್ತಿಗೆ ಸಕಾರಾತ್ಮಕ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು.
''ನಮ್ಮ ದೇಶಕ್ಕೆ ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ ಅವರ ಕೊಡುಗೆ ಬಗ್ಗೆ ಉಲ್ಲೇಖಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಮುಂದಾದೆ. ಅವರ ಕೊಡುಗೆ, ಸೇವೆ ನಮಗೆ ದೊಡ್ಡ ವಿಷಯ. ನಾನು ನನ್ನನ್ನು ವಿನಮ್ರವಾಗಿ ತೋರಿಲು ಪ್ರಯತ್ನಿಸುತ್ತಿಲ್ಲ. ಇದೇ ಸತ್ಯಾಂಶ. ಅದು ವಾಸ್ತವಾಂಶ, ಈ ಮೂಲಕ ಇಂತಹ (ನಟರನ್ನು ಹೋಲಿಕೆ ಮಾಡೋದು) ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುತ್ತಾರೆ. ಏಕೆಂದರೆ ಅವರು ಸ್ವತಃ ಮುಜುಗರಕ್ಕೊಳಗಾಗುತ್ತಾರೆ'' - ಸುಶ್ಮಿತಾ ಸೇನ್.