2022ನೇ ಸಾಲು ಕನ್ನಡ ಚಿತ್ರರಂಗಕ್ಕೆ ಸುವರ್ಣ ಕಾಲ. ಸೂಪರ್ ಹಿಟ್ ಸಿನಿಮಾಗಳು ನಿರ್ಮಾಣವಾಗಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಮ್ಮ ಗಮನ ಹರಿಸುವಂತಾಯ್ತು. ಹಾಗಂತ ನಿರ್ಮಾಣವಾದ ಸಿನಿಮಾಗಳೆಲ್ಲವೂ ತನ್ನ ಗುರಿ ತಲುಪಿಲ್ಲ. ನಿರೀಕ್ಷೆ ಹುಸಿ ಮಾಡಿದ ಸಿನಿಮಾಗಳೂ ಸಹ ಇವೆ. ಸೂಪರ್ ಹಿಟ್ ಸಿನಿಮಾಗಳ್ಯಾವುವು? ಪ್ರೇಕ್ಷಕರ ನಂಬಿಕೆ ಹುಸಿ ಮಾಡಿದ ಚಿತ್ರಗಳು ಯಾವುವು? ಇಲ್ಲಿದೆ ಕೆಲ ಮಾಹಿತಿ.
ಒಂಬತ್ತನೇ ದಿಕ್ಕು:2022ನೇ ವರ್ಷದ ಆರಂಭದಲ್ಲೇ ಬಹಳ ಆತ್ಮ ವಿಶ್ವಾಸದಿಂದ ಚಿತ್ರಮಂದಿರಕ್ಕೆ ಬಂದ ಮೊದಲ ಸಿನಿಮಾ ಲೂಸ್ ಮಾದ ಯೋಗಿ ಅಭಿನಯದ ಒಂಬತ್ತನೇ ದಿಕ್ಕು. ನಿರ್ದೇಶಕ ದಯಾಳ್ ಪದ್ಮಾನಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರ ಅಂದುಕೊಂಡಂತೆ ಪ್ರೇಕ್ಷಕರನ್ನು ರಂಜಿಸಲಿಲ್ಲ. ಈ ಮಧ್ಯೆ ಬಂದ ಹೊಸಬರ ಒಪ್ಪಂದ ಹಾಗೂ ಫೋರ್ ವಾಲ್ಸ್ ಚಿತ್ರ ಕೂಡ ಸಿನಿಮಾ ಪ್ರಿಯರನ್ನು ರಂಜಿಸುವಲ್ಲಿ ವಿಫಲವಾದವು.
ಲವ್ ಮಾಕ್ ಟೈಲ್ 2:ಫೆಬ್ರವರಿಯಲ್ಲಿ ತೆರೆಗೆ ಬಂದ ಲವ್ ಮಾಕ್ ಟೈಲ್ ಸೀಕ್ವೆಲ್ ಯಶಸ್ವಿಯಾಯಿತು. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ ಲವ್ ಮಾಕ್ ಟೈಲ್ 2 ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಗೆಲುವಿನ ನಗೆ ಬೀರಿತ್ತು.
ಒಂದು ಮಟ್ಟಿನ ಯಶಸ್ಸು:ಈ ಸಿನಿಮಾ ಸಕ್ಸಸ್ ಬಳಿಕ ಒಂದು ಮಟ್ಟಿಗೆ ಯಶಸ್ಸು ಕಂಡ ಚಿತ್ರಗಳು ಅಂದ್ರೆ ಬೈ ಟು ಲವ್, ಏಕ್ ಲವ್ ಯಾ ಹಾಗು ಓಲ್ಡ್ ಮಾಂಕ್. ಹಾಕಿದ ಬಜೆಟ್ಗೆ ಮೋಸ ಆಗದ ರೀತಿ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಕಂಡವು.
ಸೂಪರ್ ಹಿಟ್ ಜೇಮ್ಸ್: ದಿವಗಂತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್ನಲ್ಲಿ ನಾಲ್ಕೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಹೋಮ್ ಮಿನಿಸ್ಟರ್:ಏಪ್ರಿಲ್ ತಿಂಗಳಲ್ಲಿ ತೆರೆಗೆ ಅಪ್ಪಳಿಸಿದ ಸ್ಟಾರ್ ನಟನ ಸಿನಿಮಾ ಅಂದ್ರೆ ಹೋಮ್ ಮಿನಿಸ್ಟರ್. ರಿಯಲ್ ಸ್ಟಾರ್ ಉಪೇಂದ್ರ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೋಮ್ ಮಿನಿಸ್ಟರ್ ಚಿತ್ರ ನಿರೀಕ್ಷೆ ಹುಸಿಯಾಗಿಸಿ ಸೈಲೆಂಟ್ ಆಗಿ ಸೈಡಿಗೆ ಸರಿಯಿತು.
ಕೆಜಿಎಫ್ ಚಾಪ್ಟರ್ 2: ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಅಭಿನಯದಲ್ಲಿ ಬಂದ ಕೆಜಿಎಫ್ ಸೀಕ್ವೆಲ್ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ತೆರೆಕಂಡು ಭಾರಿ ಸದ್ದು ಮಾಡಿತು. ಬಾಲಿವುಡ್ ಚಿತ್ರರಂಗದಲ್ಲೂ ಧೂಳೆಬ್ಬಿಸಿತು. ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಮಾತನಾಡುವ ಹಾಗೆ ಮಾಡಿತು.
ನಿರೀಕ್ಷೆ ತಲುಪದ ಸಿನಿಮಾಗಳು: ಗಾಂಧಿನಗರದಲ್ಲಿ ನಿರೀಕ್ಷೆ ಮೂಡಿಸಿದ್ದ ಶರಣ್ ಅಭಿನಯದ ಅವತಾರ ಪುರುಷ, ಮನೋರಂಜನ್ ನಟನೆಯ ಪ್ರಾರಂಭ, ರಿಷಬ್ ಶೆಟ್ಟಿ ಅವರ ಹರಿಕಥೆ ಅಲ್ಲ ಗಿರಿಕಥೆ, ಗಜಾನನ & ಗ್ಯಾಂಗ್ ಮುಂತಾದ ಸಿನಿಮಾಗಳ ಬಗ್ಗೆ ಉತ್ತಮ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆಯನ್ನು ಈ ಸಿನಿಮಾಗಳು ತಲುಪಲಿಲ್ಲ. ಒಳ್ಳೆ ಕಂಟೆಟ್ನಿಂದ ಶುಗರ್ ಲೆಸ್, ವೀಲ್ಸ್ ಚೇರ್ ರೋಮಿಯೋ ಚಿತ್ರಗಳು ಗಮನ ಸೆಳೆದವು. ಆದರೆ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಸರಿಯಿತು.
777 ಚಾರ್ಲಿ ಸಿನಿಮಾ: ಜೂನ್ 10ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಶ್ವಾನದ ಕತೆ ಆಧರಿಸಿ ಬಂದ 777 ಚಾರ್ಲಿ ಸಿನಿಮಾ ದೊಡ್ಡ ಗೆಲುವು ದಾಖಲಿಸಿತು. ಈ ಚಿತ್ರ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂಪಾಯಿ ವ್ಯವಹಾರ ಮಾಡುವ ಮೂಲಕ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.
ಇನ್ನು ಜುಲೈ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ಒಂದಷ್ಟು ಬಿಗ್ ಬಜೆಟ್ ಹಾಗೂ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬಂದವು. ಶಿವರಾಜ್‌ಕುಮಾರ್ ಅವರ ಬೈರಾಗಿ ದೊಡ್ಡ ನಿರೀಕ್ಷೆ ಮೂಡಿಸಿತ್ತಾದರೂ, ದೊಡ್ಡ ಗೆಲುವು ಪಡೆಯಲಿಲ್ಲ. ರವಿಚಂದ್ರನ್ ಅಭಿನಯದ ರವಿ ಬೋಪಣ್ಣ, ಪೆಟ್ರೋಮ್ಯಾಕ್ಸ್, ಜಗ್ಗೇಶ್ ತೋತಾಪುರಿ, ಧನಂಜಯ್ ಮಾನ್ಸೂನ್ ರಾಗ ಮುಂತಾದ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.