ರಾಮಾಯಣದ ಲಕ್ಷ್ಮಣ ಪಾತ್ರಧಾರಿ ಸುನಿಲ್ ಲಹರಿ ರಮಾನಂದ್ ಸಾಗರ್ ಅವರ 'ರಾಮಾಯಣ'ದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ನಟ ಸುನಿಲ್ ಲಹರಿ (Sunil Lahri) ಅವರು ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರದ ಸುತ್ತ ನಡೆಯುತ್ತಿರುವ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
"ನಾನು ಆದಿಪುರುಷ್ ಸಿನಿಮಾ ನೋಡಿದೆ. ಚಿತ್ರ ವೀಕ್ಷಿಸಿದ ನಂತರ ನನಗೆ ಬಹಳ ನಿರಾಶೆಯಾಗಿದೆ. ಸಿನಿಮಾ ನೋಡಲು ಏಕೆ ಹೋದೆ? ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ನನಗೆ ಚಿತ್ರ ಇಷ್ಟವಾಗಲಿಲ್ಲ. ಒಟ್ಟಾರೆಯಾಗಿ, ಚಿತ್ರದ ಬಗ್ಗೆ ನನಗೆ ಎರಡೇ ವಿಷಯಗಳು ಇಷ್ಟವಾದವು ಎಂದು ಹೇಳಬಲ್ಲೆ. ಹಿನ್ನೆಲೆ ಸಂಗೀತ ಮತ್ತು ಸಿನಿಮಾಟೋಗ್ರಫಿ ನನಗೆ ಹಿಡಿಸಿತು. ಈ ಎರಡು ಅಂಶಗಳನ್ನು ಹೊರತುಪಡಿಸಿ, ಚಿತ್ರವು ನನ್ನನ್ನು ತುಂಬಾ ನಿರಾಶೆಗೊಳಿಸಿತು" ಎಂದು ತಿಳಿಸಿದರು.
"ಚಿತ್ರವನ್ನು ನೋಡಿದ ನಂತರ, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಸುಳಿವೂ ಕೂಡ ನನಗಿರಲಿಲ್ಲ. ನಾನು ರಾಮಾಯಣದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ್ದೆ. ಈ ಚಿತ್ರ ನನಗೆ ಹಿಡಿಸಿರಲಿಲ್ಲ. ಥಿಯೇಟರ್‌ನಲ್ಲಿ ನನ್ನ ಸುತ್ತಲೂ ಕುಳಿತವರು ಸಹ ಚಲನಚಿತ್ರವನ್ನು ನೋಡಿ ಸಂತೋಷಪಡಲಿಲ್ಲ.
ನನ್ನ ಬಳಿ ಇಬ್ಬರು ಮಹಿಳೆಯರಿದ್ದರು. 'ಎದ್ದು ನಡೆಯೋಣ, ಎಂತಹ ಅಸಂಬದ್ಧತೆಯನ್ನು ನೋಡುತ್ತಿದ್ದೇವೆ?' ಎಂದು ಓರ್ವರು ಹೇಳಿದರು. ಅದಕ್ಕೆ ಮತ್ತೋರ್ವ ಮಹಿಳೆ 'ಏನಿಲ್ಲದಿದ್ದರೂ ವಿಶುವಲ್ ಎಫೆಕ್ಟ್ ನೋಡೋಣ' ಎಂದರು. ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು 'ರಾಮಾಯಣದ ಹೆಸರಲ್ಲಿ ಏನು ತೋರಿಸುತ್ತಿದ್ದಾರೆ' ಎಂದು ತಮ್ಮ ಗೆಳೆಯನಿಗೆ ಹೇಳಿದರು ಅಂತಾ ಸುನಿಲ್ ಲಹರಿ ತಮ್ಮ ಅನುಭವವನ್ನು ಹಂಚಿಕೊಂಡರು.
"ಇದು ಆಧುನಿಕ ಚಿತ್ರವೂ ಅಲ್ಲ. ಇದು ಯಾವ ಆಯಾಮದಲ್ಲಿ ಮಾಡರ್ನ್ ಆಗಿದೆ? ಪಾತ್ರಗಳು ಸ್ಪೋರ್ಟ್ ಟ್ಯಾಟೂಗಳನ್ನು ಹಾಕಿಕೊಂಡರೆ ಚಿತ್ರವು ಮಾಡರ್ನ್ ಆಗುತ್ತದೆಯೇ? ಅಥವಾ ಇದು ಇಂದಿನ ಹೇರ್ ಸ್ಟೈಲ್ ನಿಂದ ಮಾರ್ಡೆನ್ ಆಗಿದೆಯೇ?. ಪಾತ್ರಗಳಿಂದ ಹಿಡಿದು ತೆರೆ ಮೇಲೆ ರವಾನಿಸಿದ ರೀತಿವರೆಗೂ ಚಿತ್ರ ಚೆನ್ನಾಗಿ ಮೂಡಿಬಂದಿಲ್ಲ. ಸಿನಿಮಾ ಯಾರಿಗಾಗಿ ಮಾಡಲ್ಪಟ್ಟಿದೆ ಎಂದು ನನಗೆ ತಿಳಿದಿಲ್ಲ. ಅವರು ಭಗವಾನ್ ಹನುಮಾನ್ನನ್ನು ಆಡು ಭಾಷೆಯಲ್ಲಿ ಮಾತನಾಡುವಂತೆ ಮಾಡಿದರು. ರಾವಣನನ್ನು ಕಬ್ಬಿಣವನ್ನು ಹೊಡೆಯುವವನಂತೆ ತೋರಿಸಲಾಗಿದೆ. ಅವನು ಕಮ್ಮಾರನೇ?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:Adipurush: ವಿವಾದಕ್ಕೊಳಗಾದ ಭಗವಾನ್ ಹನುಮಂತನ ಡೈಲಾಗ್ಸ್ ಸರಿಪಡಿಸಿದ ಚಿತ್ರತಂಡ - ವಿಡಿಯೋ ನೋಡಿ
ಈ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಸಿನಿಮಾದ ಬಗ್ಗೆ ಹೆಚ್ಚು ಚರ್ಚೆಯಾದ ಹಿನ್ನೆಲೆ ಉತ್ತಮ ವೀಕ್ಷಣಾ ಅನುಭವ ಸಿಗುತ್ತದೆ ಎಂದು ನಾನು ಭಾವಿಸಿದ್ದೆ. ಮಾಧ್ಯಮದವರು ನನ್ನ ಬಳಿ ಬಂದಾಗ, ನಾನು ಸಿನಿಮಾ ನೋಡುವವರೆಗೂ ಹೇಳಿಕೆ ಕೊಡುವುದಿಲ್ಲ ಎಂದು ಹೇಳಿದ್ದೆ. ಚಿತ್ರ ನೋಡಿದ ನಂತರ, ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಮಾಯಣ ಆಧಾರಿತ ಸಿನಿಮಾಗಿಲ್ಲ ಸ್ಪಂದನೆ: ಆದಿಪುರುಷ್ ಗಳಿಕೆ ಇಳಿಕೆ!!
ಓಂ ರಾವುತ್ ನಿರ್ದೇಶಿಸಿರುವ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತಾ ದೇವಿಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ, ದೇವದತ್ತ ಹನುಮಂತನಾಗಿ ನಟಿಸಿದ್ದಾರೆ. ಮೊದಲ ಮೂರು ದಿನ ಚಿತ್ರಮಂದಿಗಳಲ್ಲಿ ಧೂಳೆಬ್ಬಿಸಿದ ಸಿನಿಮಾ ಆರನೇ ದಿನ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು 7.50 ಕೋಟಿ ರೂ.