ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪ್ರೇಮಪತ್ರ ಬರೆದಿದ್ದಾನೆ. ತಾರೆ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಪ್ರೇಯಸಿ ಎಂದು ಹೇಳಿಕೊಂಡಿರುವ ಸುಕೇಶ್ ಚಂದ್ರಶೇಖರ್, ಆಗಾಗ್ಗೆ ಪ್ರೇಮಪತ್ರಗಳನ್ನು ಬರೆಯುವ ಮೂಲಕ ಸುದ್ದಿಯಾಗುತ್ತಾನೆ. ಅದರಂತೆ ಇದೀಗ ಮತ್ತೊಂದು ಪ್ರೇಮಪತ್ರ ಬರೆದಿದ್ದು, ಇತ್ತೀಚೆಗೆ 'ದೋಹಾ ಶೋ'ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಾಲಿವುಡ್ ಚಿತ್ರನಟಿಯನ್ನು ಹಾಡಿ ಹೊಗಳಿದ್ದಾರೆ.
ಸದ್ಯ ರಾಷ್ಟ್ರ ರಾಜಧಾನಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್‌ಗೆ ಕಾಂಪ್ಲಿಮೆಂಟ್ಸ್ ಕೊಡೋ ಮುಖೇನ ತಮ್ಮ ಪತ್ರ ಪ್ರಾರಂಭಿಸಿದ್ದಾನೆ. ನಟಿಯ ಸೌಂದರ್ಯ ಗುಣಗಾನ ಮಾಡಿದ ಸುಕೇಶ್, ಇತ್ತೀಚೆಗೆ ದೋಹಾ ಶೋನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
"ಬೇಬಿ ನೀನು ದೋಹಾ ಶೋನಲ್ಲಿ ಸಖತ್ ಹಾಟ್ ಹಾಗೂ ಸುಂದರವಾಗಿ ಕಾಣುತ್ತಿದ್ದಿ. ಬೇಬಿ ನಿನಗಿಂತ ಸುಂದರವಾಗಿರುವವರು ಯಾರೂ ಇಲ್ಲ, ನನ್ನ ಬೊಮ್ಮಾ" - ಆರೋಪಿ ಸುಕೇಶ್ ಚಂದ್ರಶೇಖರ್.
ನವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ, ಸುಕೇಶ್ ಚಂದ್ರಶೇಖರ್ ನಟಿಯ ಯೋಗಕ್ಷೇಮಕ್ಕಾಗಿ 9 ದಿನಗಳ ಕಾಲ ಉಪವಾಸ ಮಾಡುವ ಬಯಕೆ ವ್ಯಕ್ತಪಡಿಸಿದ್ದಾನೆ. ನಟಿಯ ಯೋಗಕ್ಷೇಮದ ಜೊತೆಗೆ ಇಬ್ಬರ ಜೀವನದ ಸುತ್ತಲಿನ ನಕಾರಾತ್ಮಕತೆಯನ್ನು ತೊಲಗಿಸುವ ಗುರಿಯೊಂದಿಗೆ ಉಪವಾಸ ಕೈಗೊಳ್ಳಲಿದ್ದಾನೆ. ಮಾತಾ ಶಕ್ತಿಯ ದೈವಿಕ ಆಶೀರ್ವಾದದಿಂದ ಎಲ್ಲವೂ ನಮ್ಮ ಪರವಾಗಿ ಬರುತ್ತದೆ, ಸತ್ಯ ಮೇಲುಗೈ ಸಾಧಿಸಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾನೆ.
ಅಲ್ಲದೇ ಸುಕೇಶ್, ಜಾಕ್ವೆಲಿನ್‌ಗೆ ಒಗ್ಗಟ್ಟಿನ ಭರವಸೆ ನೀಡಿದ್ದಾನೆ. "ನಾವು ಶೀಘ್ರದಲ್ಲೇ ಒಂದಾಗಲಿದ್ದೇವೆ. ಬೇಬಿ, ಅದೇನೆ ಆಗಲಿ, ಅದೇನೆ ಎದುರಾಗಲಿ ನಾವಿಬ್ಬರೂ ಕೊನೆವರೆಗೂ ಒಟ್ಟಿಗೆ ಜೀವನ ನಡೆಸಲಿದ್ದೇವೆ" ಎಂದು ಪತ್ರದಲ್ಲಿ ಭರವಸೆ ವ್ಯಕ್ತಪಡಿಸಿದ್ದಾನೆ.