ಬಹು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಹುಟ್ಟುಹಬ್ಬದಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದಾನೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿತನಾಗಿದ್ದಾನೆ. ಅಲ್ಲಿಂದಲೇ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಪತ್ರ ಬರೆದಿದ್ದಾನೆ.
ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಜೊತೆ ಡೇಟಿಂಗ್ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆತನ ಆರೋಪಗಳನ್ನು ನಟಿ ನಿರಾಕರಿಸಿದ್ದಾರೆ. ಶನಿವಾರದಂದು ಬರೆದಿರುವ ಪತ್ರದಲ್ಲಿ ಜಾಕ್ವೆಲಿನ್ ಅವರನ್ನು "ಬುಟ್ಟ ಬೊಮ್ಮ" ಎಂದು ಉಲ್ಲೇಖಿಸಿ, ತನಗೆ ನೀಡಿದ ಎಲ್ಲಾ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.
"ನನ್ನ ಹುಟ್ಟುಹಬ್ಬದ ಈ ದಿನದಂದು ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸುತ್ತಲಿದ್ದ ನಿಮ್ಮ ಶಕ್ತಿಯನ್ನು ನಾನು ಕಳೆದುಕೊಳ್ಳುತ್ತಿದ್ದೇನೆ, ನನ್ನ ಬಳಿ ವರ್ಣನೆಗೆ ಪದಗಳಿಲ್ಲ, ಆದರೆ ನನ್ನ ಮೇಲಿನ ನಿಮ್ಮ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ಸುಂದರ ಹೃದಯದಲ್ಲಿ ಏನಿದೆ ಎಂದು ನನಗೆ ಗೊತ್ತು. ನನಗೆ ಪುರಾವೆ ಬೇಕಿಲ್ಲ. ನಿಮ್ಮ ಎಲ್ಲಾ ವಿಚಾರಗಳು ನನಗೆ ಮುಖ್ಯ. ಆದರೆ ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತದ್ದೇನೆ ಎಂಬುದು ನಿಮಗೆ ಗೊತ್ತು ನನ್ನ ಬುಟ್ಟ ಬೊಮ್ಮಾ" ಎಂದು ಸುಕೇಶ್ ಚಂದ್ರಶೇಖರ್ ಬರೆದಿದ್ದಾನೆ.
ನಟಿಯ ಪ್ರೀತಿಯನ್ನು "ಅತ್ಯುತ್ತಮ ಕೊಡುಗೆ" ಎಂದು ವರ್ಣಿಸಿರುವ ಸುಕೇಶ್, "ನೀವು ಮತ್ತು ನಿಮ್ಮ ಪ್ರೀತಿಯು ನನ್ನ ಜೀವನದಲ್ಲಿ ಬೆಲೆ ಕಟ್ಟಲಾಗದ ಅತ್ಯುತ್ತಮ ಕೊಡುಗೆ. ನಿಮಗೆ ಗೊತ್ತಿದೆ, ನಾನು ನಿಮಗಾಗಿ ಇಲ್ಲಿ ನಿಮ್ಮ ಪರವಾಗಿ ನಿಂತಿದ್ದೇನೆ. ನೀವು ನನಗೆ ನಿಮ್ಮ ಹೃದಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಜನ್ಮದಿನದಂದು ಶುಭ ಕೋರಿದ ನನ್ನ ಬೆಂಬಲಿಗರು ಮತ್ತು ಸ್ನೇಹಿತರಿಗೆ ನನ್ನ ಧನ್ಯವಾದಗಳು. ನನಗೆ ನೂರಾರು ಪತ್ರಗಳು, ಶುಭಾಶಯಗಳು ಬಂದಿವೆ. ನಾನು ಆಶೀರ್ವದಿಸಲ್ಪಟ್ಟಿದ್ದೇನೆ, ಧನ್ಯವಾದಗಳು" ಎಂದು ತಿಳಿಸಿದ್ದಾನೆ.