ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ತಮ್ಮ ವಕೀಲರ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ನಟಿ, ಡ್ಯಾನ್ಸರ್ ನೋರಾ ಫತೇಹಿ ವಿರುದ್ಧ ಆರೋಪಗಳ ಮಳೆ ಸುರಿಸಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಟಿ ನೋರಾ ಫತೇಹಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಅಸೂಯೆ ಹೊಂದಿದ್ದರು ಎಂದು ಸುಕೇಶ್ ಆರೋಪಿಸಿದ್ದಾನೆ. ನಾನು ಜಾಕ್ವೆಲಿನ್ನನ್ನು ಬಿಟ್ಟು ಹೋಗಬೇಕೆಂದು ನೋರಾ ಬಯಸಿದ್ದರು ಎಂದು ಕೂಡ ಹೇಳಿದ್ದಾನೆ. ಅಷ್ಟೇ ಅಲ್ಲ, ನೋರಾ ಫತೇಹಿ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮಾಡಿರುವ ಆರೋಪಗಳನ್ನು ಸಹ ಅಪರಾಧಿ ಸುಕೇಶ್ ಚಂದ್ರಶೇಖರ್ ತಳ್ಳಿಹಾಕಿದ್ದಾನೆ.
ನಟಿ ನೋರಾ ಫತೇಹಿ ಆರ್ಥಿಕ ಅಪರಾಧಗಳ ಬ್ಯೂರೋ (ಇಒಡಬ್ಲ್ಯೂ) ಮುಂದೆ ತಮ್ಮ ಹೇಳಿಕೆಯನ್ನು ತಪ್ಪಾಗಿ ನೀಡಿದ್ದಾರೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ. ಪತ್ರದಲ್ಲಿ ಈ ಬಗ್ಗೆ ಬರೆದಿರುವ ಸುಕೇಶ್, 'ನಾನು ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಸಂಬಂಧದ ಬಗ್ಗೆ ಗಂಭೀರವಾಗಿದ್ದೆವು. ಈ ಹಿನ್ನೆಲೆ ನೋರಾ ಅವರು ಜಾಕ್ವೆಲಿನ್ ಬಗ್ಗೆ ಅಸೂಯೆ ಪಟ್ಟರು. ಜಾಕ್ವೆಲಿನ್ ಬಗ್ಗೆ ನನ್ನ ಬ್ರೈನ್ ವಾಶ್ ಮಾಡುತ್ತಿದ್ದರು. ನಾನು ಜಾಕ್ವೆಲಿನ್ನನ್ನು ಬಿಟ್ಟು ಅವರೊಂದಿಗೆ ಡೇಟಿಂಗ್ ಮಾಡಬೇಕೆಂದು ನೋರಾ ಫತೇಹಿ ಬಯಸಿದ್ದರು. ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನಗೆ ಕರೆ ಮಾಡುತ್ತಿದ್ದರು. ಕರೆಗಳಿಗೆ ಉತ್ತರಿಸದಿದ್ದಾಗ ಕರೆ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾನೆ.
ಈ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ನೋರಾ ಅವರು ಪರಿಶೀಲನೆಗೆ ಒಳಗಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ ತನಗೆ ಯಾವುದೇ ಕಾರು ಬೇಡ ಎಂದು ಹೇಳಿದ್ದರು. ಈ ಕುರಿತು ಸುಕೇಶ್, 'ನೋರಾ ಸುಳ್ಳು ಹೇಳುತ್ತಿದ್ದಾರೆ. ನೋರಾ ತನ್ನ ಕಾರನ್ನು ಬದಲಾಯಿಸುವ ಸಲುವಾಗಿ ನನ್ನ ಬಳಿಗೆ ಬಂದರು. ಆ ಸಮಯದಲ್ಲಿ ಅವರ ಬಳಿ ಮರ್ಸಿಡಿಸ್ ಸಿಎಲ್ಎ ಕಾರು ಇತ್ತು. ನೋರಾ ಅವರು ಇದು ಬಹಳ ಅಗ್ಗದ ಕಾರು ಎಂದು ಭಾವಿಸಿದರು. ಆದ್ದರಿಂದ ನೋರಾ ಮತ್ತು ನಾನು ಒಟ್ಟಿಗೆ ಒಂದು ಕಾರನ್ನು ಆರಿಸಿದೆವು. ಇಡಿ ನನ್ನ ಚಾಟ್ಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಹೊಂದಿದೆ, ಅದು ಎಲ್ಲವನ್ನೂ ನಿಜವೆಂದು ಸಾಬೀತುಪಡಿಸುತ್ತದೆ. ಇದರಲ್ಲಿ ಯಾವುದೇ ಸುಳ್ಳಿಲ್ಲ' ಎಂದು ಹೇಳಿದ್ದಾನೆ.