ಜೋಯಾ ಅಖ್ತರ್ ಅವರ ದಿ ಆರ್ಚೀಸ್ (The Archies) ಮೂಲಕ ಶೀಘ್ರದಲ್ಲೇ ಬಾಲಿವುಡ್ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಲಿರುವ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮಹಾರಾಷ್ಟ್ರದ ಅಲಿಬಾಗ್ನ ಥಾಲ್ ಗ್ರಾಮದಲ್ಲಿ 12.91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆಶ್ಚರ್ಯಕರ ವಿಷಯ ಎಂದರೆ, ನೋಂದಣಿ ಫಾರ್ಮ್ಗಳಲ್ಲಿ ಸುಹಾನಾ ಖಾನ್ ಅವರನ್ನು "ಕೃಷಿಕರು" ಎಂದು ಉಲ್ಲೇಖಿಸಲಾಗಿದೆ.
ಜೂನ್ 1 ರಂದು ದಾಖಲಾಗಿರುವ ವಹಿವಾಟಿನ ಪ್ರಕಾರ, 1.5 ಎಕರೆ ಕೃಷಿ ಭೂಮಿಯನ್ನು ಖರೀದಿಸಲಾಗಿದೆ. IndexTap.com ಹಂಚಿಕೊಂಡ ನೋಂದಣಿ ದಾಖಲೆಗಳು, 77.46 ಲಕ್ಷ ರೂಪಾಯಿ ಸ್ಟ್ಯಾಂಪ್ ಮೊತ್ತವನ್ನು ಸುಹಾನಾ ಪಾವತಿಸಿರುವುದಾಗಿ ತೋರಿಸಿದೆ. ಈ ಭೂಮಿಯನ್ನು ಅಂಜಲಿ, ರೇಖಾ ಮತ್ತು ಪ್ರಿಯಾ ಖೋತ್ ಎಂಬ ಮೂವರು ಸಹೋದರಿಯರಿಂದ ಈ ಭೂಮಿ ಖರೀದಿಸಲಾಗಿದೆ. ಅವರು ಆ ಭೂಮಿಯನ್ನು ತಮ್ಮ ಪೋಷಕರಿಂದ ಪಡೆದಿದ್ದರು.
ಆಸ್ತಿಯನ್ನು ದೇಜಾ ವು ಫಾರ್ಮ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇದರ ನಿರ್ದೇಶಕರು ಎಸ್ಆರ್ಕೆ ಅವರ ಅತ್ತೆ ಸವಿತಾ ಛಿಬ್ಬರ್ ಮತ್ತು ಎಸ್ಆರ್ಕೆ ಅವರ ಅತ್ತಿಗೆ ನಮಿತಾ ಚಿಬ್ಬರ್. ಅಲಿಬಾಗ್ ಪಟ್ಟಣವು ಥಾಲ್ ಗ್ರಾಮದಿಂದ ಕೊಂಚ (12 ನಿಮಿಷಗಳ ಕಾರು ಪ್ರಯಾಣ) ದೂರದಲ್ಲಿದೆ. ವರದಿಗಳ ಪ್ರಕಾರ, ಶಾರುಖ್ ಖಾನ್ ಥಾಲ್ನಲ್ಲಿ ಹೆಲಿಪ್ಯಾಡ್ ಮತ್ತು ಪೂಲ್ ವ್ಯವಸ್ಥೆ ಇರುವ ಕಡಲತೀರದ ಮನೆಯನ್ನು ಹೊಂದಿದ್ದಾರೆ. ಆ ಬಂಗಲೆಯಲ್ಲಿ ಕಿಂಗ್ ಖಾನ್ ತಮ್ಮ 52ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.
ನಟಿ ದೀಪಿಕಾ ಪಡುಕೋಣೆ, ನಟ ರಣ್ವೀರ್ ಸಿಂಗ್, ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ, ಉದ್ಯಮಿ ಗೌತಮ್ ಸಿಂಘಾನಿಯಾ ಸೇರಿದಂತೆ ಮುಂಬೈನ ಹಲವಾರು ಖ್ಯಾತನಾಮರು ಅಲಿಬಾಗ್ನಲ್ಲಿ ವಿಹಾರಕ್ಕಾಗಿ ಮನೆಗಳನ್ನು ಹೊಂದಿದ್ದಾರೆ. ಮುಂಬೈ ಮತ್ತು ಅಲಿಬಾಗ್ಗೆ ಸಂಪರ್ಕ ಸುಲಭಗೊಳಿಸಲು ರೋ-ರೋ ಶಿಪ್ ಮತ್ತು ಸ್ಪೀಡ್ ಬೋಟ್ಗಳ ವ್ಯವಸ್ಥೆ ಕೂಡ ಇದೆ.