ಮನೋರಂಜನಾ ಕ್ಷೇತ್ರದಲ್ಲಿ ಸಾಧನೆಗೈದ ಅನೇಕರು ತಮ್ಮ ಮಕ್ಕಳನ್ನು ಅದೇ ಉದ್ಯಮದಲ್ಲಿ ಮುಂದುವರಿಸಲು ಯತ್ನಿಸುತ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಬಾಲಿವುಡ್ನಲ್ಲಿ ಈ ಸಂಸ್ಕೃತಿಯನ್ನು ಕಾಣಬಹುದು. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸಹ ಈ ವಲಯದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬಾಲಿವುಡ್ ಬಹುಬೇಡಿಕೆ ನಟ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ ದಂಪತಿ ಪುತ್ರಿ ಸುಹಾನಾ ಖಾನ್ ಇನ್ನೂ ಸಿನಿ ಜಗತ್ತಿಗೆ ಎಂಟ್ರಿ ಆಗಿಲ್ಲ. ಅದಕ್ಕೂ ಮೊದಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಸೌಂದರ್ಯ ವರ್ಧಕ ಬ್ರ್ಯಾಂಡ್‌ನ ಅಂಬಾಸಿಡರ್ ಆಗಿ ಸಹಿ ಮಾಡಿದ್ದಾರೆ. ಇವರು ಮೆಬಿಲಿನ್ (Maybelline) ಬ್ರ್ಯಾಂಡ್ ಅಂಬಾಸಿಡರ್ ಎಂಬ ವಿಷಯ ಗೊತ್ತಾದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾರುಖ್ ಖಾನ್ ಅವರ ಮುದ್ದು ಮಗಳು ಸುಹಾನಾ ಖಾನ್ ವೃತ್ತಿ ಜೀವನ ವಿಚಾರವಾಗಿ ಮಾಧ್ಯಮದಲ್ಲಿ ಕಾಣಿಸಿಕೊಂಡ ಮೊದಲ ವಿಷಯ ಇದಾಗಿದೆ. ಬ್ಯೂಟಿ ಪ್ರೊಡಕ್ಟ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಬಗ್ಗೆ ವೇದಿಕೆಯೊಂದರಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಪಾಪರಾಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಹೊರಬಿದ್ದ ಕೂಡಲೇ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕೆಲ ನೆಟ್ಟಿಗರು ಸ್ಟಾರ್ ಕಿಡ್ ಅನ್ನು ಟ್ರೋಲ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆಯಾ ಎಂಬ ಚರ್ಚೆ ಶುರು ಹಚ್ಚಿಕೊಂಡಿದ್ದಾರೆ.
ಬ್ಯೂಟಿ ಪ್ರೊಡಕ್ಟ್ ಬ್ರ್ಯಾಂಡ್ ಅಂಬಾಸಿಡರ್ ಆಗಲು ಈವರೆಗೆ ಸುಹಾನಾ ಖಾನ್ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಂದೆ ಶಾರುಖ್ ಖಾನ್ ಅವರೇ ಬ್ರ್ಯಾಂಡ್ ಅಂಬಾಸಿಡರ್ ಆದಂತೆ ತೋರುತ್ತಿದೆ. ಈವರೆಗೆ ಯಾವುದೇ ಸಿನಿಮಾ ಆಥವಾ ಆಲ್ಬಂ ಸಾಂಗ್ ರಿಲೀಸ್ ಮಾಡಿಲ್ಲ. ಇದ್ದಕ್ಕಿದ್ದಂತೆ ಸೌಂದರ್ಯವರ್ಧಕ ಉತ್ಪನ್ನದ ರಾಯಭಾರಿ ಆದದ್ದು ಹೇಗೆ? ಇದು ಪಕ್ಷಪಾತವಾಗಿದೆ ಎಂಬ ಚರ್ಚೆಗೆ ವೇದಿಕೆ ಸೃಷ್ಟಿಮಾಡಿಕೊಟ್ಟಂತಿದೆ.