ದಿಯಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ನಟ ಪೃಥ್ವಿ ಅಂಬರ್. ಬೈರಾಗಿ ಸಿನಿಮಾದ ಯಶಸ್ಸಿನ ಅಲೆಯಲ್ಲಿರೋ ಪೃಥ್ವಿ, ಶುಗರ್ ಲೆಸ್ ಸಿನಿಮಾ ಬಗ್ಗೆ ಜಪ ಮಾಡ್ತಾ ಇದ್ದಾರೆ. ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನದ ಕಥೆ ಇದಾಗಿದ್ದು, ಪೃಥ್ವಿ ಅಂಬರ್ ಜೋಡಿಯಾಗಿ ಪ್ರಿಯಾಂಕ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಸಿನಿಮಾವನ್ನ ನಿರ್ಮಾಣ ಮಾಡಿದ್ದ ಕೆ.ಎಂ.ಶಶಿಧರ್ ಈಗ ಶುಗರ್ಲೆಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.
ಈ ಚಿತ್ರದ ವಿಶೇಷತೆ ಬಗ್ಗೆ ಮಾತನಾಡಿರೋ ಪೃಥ್ವಿ ಅಂಬರ್, ಚಿತ್ರದ ಟೈಟಲ್ ಅಷ್ಟೇ ಶುಗರ್ಲೆಸ್, ಸಿನಿಮಾದ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳಿನ್ ಅವರು ಅದ್ಭುತವಾದ ಮ್ಯೂಸಿಕ್ ರಚನೆ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ, ಮನೋರಂಜನಾತ್ಮಕ ಚಿತ್ರ ಎಂದು ಹೇಳಿದರು.
ಬಳಿಕ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಶಶಿಧರ್ ಮಾತನಾಡುತ್ತ, ಇದೊಂದು ವಿಶೇಷವಾದಂತ ಸಿನಿಮಾ, ಈ ಹಿಂದೆ ಬಂದಂಥ ಕಂಟೆಂಟ್ ಒರಿಯಂಟೆಡ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂದಿಸಿದ ಸಿನಿಮಾ ಆಗಿದೆ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು, ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್, ಬಿಪಿ, ಹಾರ್ಟ್ ಅಟ್ಯಾಕ್ ನಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನೋರಂಜನೆಯ ಮೂಲಕ ಮೆಸೇಜ್ ಹೇಳುವ ಪ್ರಯತ್ನ ಈ ಚಿತ್ರದ ಮೂಲಕ ಆಗಿದೆ ಎಂದರು.