ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ಡಾರ್ಲಿಂಗ್ ಕೃಷ್ಣ ಇದೀಗ 'ಶುಗರ್ ಫ್ಯಾಕ್ಟರಿ' ನಿರ್ಮಾಣ ಮಾಡಿದ್ದಾರೆ. ಅಯ್ಯೋ, ಶುಗರ್ ಫ್ಯಾಕ್ಟರಿಗೂ ಡಾರ್ಲಿಂಗ್ ಕೃಷ್ಣನಿಗೂ ಏನ್ ಸಂಬಂಧ ಅಂದುಕೊಂಡ್ರಾ?. ಇದು ಲವ್ ಮಾಕ್ಟೈಲ್ ಹೀರೋನ ಹೊಸ ಚಿತ್ರ. ವಿಭಿನ್ನ ಶೀರ್ಷಿಕೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ.
ಶುಗರ್ ಫ್ಯಾಕ್ಟರಿ ಟ್ರೇಲರ್ ಅನಾವರಣ: ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ಶುಗರ್ ಫ್ಯಾಕ್ಟರಿ ಚಿತ್ರದ ಆಫೀಶಿಯಲ್ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ. ಸದ್ಯ ಬಿಡುಗಡೆ ಆಗಿರುವ ಶುಗರ್ ಫ್ಯಾಕ್ಟರಿ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್ನಲ್ಲಿ ಮೂವರು ಬೆಡಗಿಯರ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್ ಮಾಡಿದ್ದು, ಟ್ರಯಾಂಗಲ್ ಲವ್ ಸ್ಟೋರಿ ಎನಿಸುತ್ತಿದೆ. ಎರಡು ನಿಮಿಷಗಳ ಟ್ರೇಲರ್ನಲ್ಲೇ ಇಷ್ಟು ಮನರಂಜನೆ, ಹಾಸ್ಯಭರಿತ ಸಂಭಾಷಣೆಗಳಿದೆ. ಕಂಪ್ಲೀಟ್ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸೋದು ಪಕ್ಕಾ. ಲವ್ಸ್ಟೋರಿ ವಿತ್ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ಬಗ್ಗೆ ಪ್ರೇಕ್ಷಕರು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಜೆಟ್ ಸಿನಿಮಾ:ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ "ಶುಗರ್ ಫ್ಯಾಕ್ಟರಿ" ಬಿಗ್ ಬಜೆಟ್ ಚಿತ್ರವಾಗಿದೆ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಅವರು ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ಈ ಹಿಂದೆ ನಿರ್ದೇಶಕ ದೀಪಕ್ ಅರಸ್ ತಿಳಿಸಿದಂತೆ, ಈಗಿನ ಜನರೇಶನ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಮಾಡಿ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ಶಶಿ ಹಾಗೂ ಮಹಾಂತೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.