ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸಿನಿಮಾ ಬಗ್ಗೆ ತಮ್ಮ ಪ್ರೀತಿಯನ್ನು, ಮೆಚ್ಚುಗೆಯನ್ನು ಆಗಾಗ್ಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಚಲನಚಿತ್ರಗಳ ಮೇಲಿನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ರಾಝಿ (Raazi) ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ಅಭಿನಯವು ಅಮೋಘ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರ್ಷ ಕಳೆದಂತೆ ಸುಧಾ ಮೂರ್ತಿ ಅವರ ಮೆಚ್ಚಿನ ತಾರೆಯರ ಪಟ್ಟಿ ದೊಡ್ಡದಾಗುತ್ತಾ ಬಂದಿದೆ. ಲೆಜೆಂಡರಿ ಆ್ಯಕ್ಟರ್ ದಿಲೀಪ್ ಕುಮಾರ್, ಎವರ್ ಚಾರ್ಮಿಂಗ್ ರಾಜೇಶ್ ಖನ್ನಾರಿಂದ ಹಿಡಿದು ಬಹುಮುಖ ಪ್ರತಿಭೆ ಹೃತಿಕ್ ರೋಷನ್ ಮತ್ತು ಬಾಲಿವುಡ್ ಕಿಂಗ್ ಶಾರುಖ್ ಖಾನ್ವರೆಗೆ ಸುಧಾ ಮೂರ್ತಿ ಅವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಹಲವು ನಟರ ಅದ್ಭುತ ಅಭಿನಯವನ್ನು ಆನಂದಿಸಿದ್ದಾರೆ. ನಟರ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ಪ್ರತಿಭಾವಂತ ನಟ ಆಯುಷ್ಮಾನ್ ಖುರಾನಾ ಕೂಡ ಸುಧಾ ಮೂರ್ತಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ.
ನಟಿಯರ ವಿಷಯಕ್ಕೆ ಬಂದರೆ, 1950ರ ದಶಕದ ಬಹುಬೇಡಿಕೆ ನಟಿ ವೈಜಂತಿಮಾಲಾ ಅವರಿಂದ ಹಿಡಿದು ಇಂದಿನ ಆಲಿಯಾ ಭಟ್ ವರೆಗೂ ಹಲವು ಮಂದಿ ಇದ್ದಾರೆ. ಸುಧಾ ಮೂರ್ತಿ ಅವರು ನಟಿ ವೈಜಯಂತಿಮಾಲಾ ಅವರ ಕಟ್ಟಾ ಅಭಿಮಾನಿ ಕೂಡ ಹೌದು. ಅಸಾಧಾರಣ ನಟನಾ ಪ್ರತಿಭೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ನರ್ಗೀಸ್ ಅವರಂತಹ ನಟಿಮಣಿಯರೂ ಕೂಡ ಸುಧಾ ಮೂರ್ತಿಯವರ ಮೆಚ್ಚಿನ ನಟಿಯರ ಪಟ್ಟಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಸುಧಾ ಅವರು ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ಅವರ ಅದ್ಭುತ ಪ್ರತಿಭೆಗೆ ಪ್ರಭಾವಿತರಾಗಿದ್ದಾರೆ. ಅವರನ್ನು ಗಮನಾರ್ಹ ನಟಿ ಎಂದು ಕೂಡ ಪರಿಗಣಿಸುತ್ತಾರೆ.