ಉದ್ಯಮಿ, ಸಮಾಜ ಸೇವಕಿಯಾಗಿರುವ ಸುಧಾ ಮೂರ್ತಿ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿಯವರ ಪತ್ನಿಯಾಗಿರುವ ಇವರು ಉದಾತ್ತ ವ್ಯಕ್ತಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಅವರು ಇತ್ತೀಚೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಅವರ ಜೊತೆಗೆ ಕೆಜಿಎಫ್ 2 ನಟಿ ರವೀನಾ ಟಂಡನ್ ಮತ್ತು ಆಸ್ಕರ್ ವಿಜೇತೆ ನಿರ್ಮಾಪಕಿ ಗುನೀತ್ ಮೋಂಗಾ ಕೂಡ ಭಾಗಿಯಾಗಿದ್ದರು.
ಈ ವೇಳೆ ಅವರೆಲ್ಲರೂ ತಮ್ಮ ವೈಯಕ್ತಿಕ ಜೀವನದ ಅನೇಕ ವಿಚಾರಗಳನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಸುಧಾ ಮೂರ್ತಿಯವರ ಜೀವನಗಾಥೆಯಂತೂ ಪ್ರೇಕ್ಷಕರನ್ನು ಬಹುವಾಗಿ ಸೆಳೆದಿದೆ. ಸುಧಾ ಅವರು ಕೆಲವು ವರ್ಷದ ಹಿಂದೆ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಯಾರೋ ಕೆಳವರ್ಗದ ಜನ ಎಂದು ಕರೆದಿದ್ದರು ಎಂಬುದನ್ನು ನೆನಪಿಸಿಕೊಂಡರು.
ಸುಧಾ ಮೂರ್ತಿಯವರು ವಿದೇಶಕ್ಕೆ ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರ ಡ್ರೆಸ್ ಕಂಡು ಕೆಳವರ್ಗದ ಜನ ಎಂದು ಒಬ್ಬ ವ್ಯಕ್ತಿ ಕರೆದರಂತೆ. ಅವರು 4- 5 ವರ್ಷಗಳ ಹಿಂದೆ ಸಿಂಪಲ್ ಸಲ್ವಾರ್ ಕಮೀಜ್ ಧರಿಸಿ ವಿಮಾನ ನಿಲ್ದಾಣದಲ್ಲಿ ಬ್ಯುಸಿನೆಸ್ ಕ್ಲಾಸ್ ಕ್ಯೂನಲ್ಲಿ ನಿಂತಿದ್ದರಂತೆ. ಅವರ ಡ್ರೆಸ್ ಕಂಡು ಬಡವರೆಂದು ಭಾವಿಸಿ ಕ್ಯಾಟಲ್ ಕಾಸ್ಟ್ ವರ್ಗದ ಜನರು ಎಂದು ಕರೆದಿದ್ದರಂತೆ.
ಈ ಘಟನೆಯನ್ನು ನೆನಪಿಸಿಕೊಂಡ ಅವರು, "ಒಬ್ಬರನ್ನು ಅವರು ಹಾಕಿದ ಬಟ್ಟೆಯಿಂದ ವ್ಯಾಖ್ಯಾನಿಸುವುದಲ್ಲ. ಅದಕ್ಕೆ ಪ್ರಾಮುಖ್ಯತೆಯೂ ಇರುವುದಿಲ್ಲ. ನಾವು ಮಾಡುವ ಕೆಲಸದಿಂದ ಮತ್ತು ಅದನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೀರ ಎಂಬುದರ ಮೇಲೆ 'ವರ್ಗ'ವನ್ನು ವ್ಯಾಖ್ಯಾನಿಸಲಾಗುತ್ತದೆ. ಇದು ಖಂಡಿತ ಹಣಕ್ಕೆ ಸಂಬಂಧಿಸಿದಲ್ಲ" ಎಂದರು. ಇದು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತು. ಸುಧಾ ಮೂರ್ತಿ ಸರಳತೆ ಮತ್ತೊಮ್ಮೆ ಸಾಬೀತಾಯಿತು.