ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಮೂಡಿ ಬರುತ್ತಿವೆ. ಒಂದೊಳ್ಳೆ ಕಥಾಹಂದರ ಮತ್ತು ಫನ್ ಎಲಿಮೆಂಟ್ಸ್ ಜೊತೆ ಬಂದ ಅನೇಕ ಸಿನಿಮಾಗಳು ಕನ್ನಡ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ಸು ಕಂಡಿವೆ. ಈ ಸಾಲಿಗೆ ದೂದ್ ಪೇಡಾ ಖ್ಯಾತಿಯ ದಿಗಂತ್ ಅಭಿನಯದ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರ ಕೂಡ ಸೇರುವ ವಿಶ್ವಾಸದಲ್ಲಿ ಚಿತ್ರತಂಡವಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರಕ್ಕೀಗ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.
ಹೌದು, ಸಿನಿಮಾ, ನಟನೆ, ನಿರ್ದೇಶನ ಹಾಗೂ ಕ್ರಿಕೆಟ್ ಎಂದು ಪೈಲ್ವಾನ್ ತಮ್ಮ ಗೆಳೆಯರ ಹೊಸ ಪ್ರಯತ್ನಗಳಿಗೆ ಸಪೋರ್ಟ್ ಮಾಡುತ್ತ ಬಂದಿದ್ದಾರೆ. ಇದೀಗ ಕಿಚ್ವನ ಆಪ್ತ ಗೆಳೆಯರ ಬಳಗದಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ದಿಗಂತ್ ಸಿನಿಮಾದ ಟೀಸರ್ ಅನಾವರಣಗೊಂಡಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಗೆಳೆಯನ ಚಿತ್ರಕ್ಕೆ ಕಿಚ್ಚ ಸಾಥ್ ನೀಡಿದ್ದಾರೆ. ಸದ್ಯ ರಿವೀಲ್ ಆಗಿರುವ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದ ಟೀಸರ್ ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಅಂಶಗಳಿಂದ ಕೂಡಿದೆ.
ವಿಶೇಷ ಅಂದ್ರೆ ದಿಗಂತ್ ಜನ್ಮದಿನ ವಿಶೇಷವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಬರ್ತ್ಡೇ ಗಿಫ್ಟ್ ಕೊಟ್ಟಿದೆ. ಸ್ಯಾಂಡಲ್ವುಡ್ನಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ದಿಗಂತ್ 40ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದವರು ಶುಭಾಶಯ ಕೋರಿದ್ದಾರೆ.