ಚಾಮರಾಜನಗರ: ಚಿತ್ರ ನಿರ್ಮಾಪಕ ಕುಮಾರ್ ಹಾಗೂ ಸುರೇಶ್ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ದೂರು ಕೊಟ್ಟು ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ನಟ ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ಮೂಲದ ನಿರ್ಮಾಪಕ ಎಂ ಎನ್ ಕುಮಾರ್ ಹಾಗೂ ಎಂ ಎನ್ ಸುರೇಶ್ ಎಂಬುವವರು ಸುಳ್ಳು ಸುದ್ದಿ ಹಾಗೂ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸುದೀಪ್ ಅವರಿಗೆ ಮಾನಹಾನಿ ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಹಾಗೂ ಇನ್ನಿತರರು ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: ಜುಲೈ 2ರಂದು ಕಿಚ್ಚ ಸುದೀಪ್ ಅವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಮರುದಿನ ನಿರ್ಮಾಪಕ ಎನ್ ಎಂ ಕುಮಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ, ಅಭಿನಯ ಚಕ್ರವರ್ತಿ ವಿರುದ್ಧ ಆರೋಪ ಮಾಡಿದ್ದರು. ಸುದೀಪ್ ಅವರು ನನ್ನ ಜೊತೆ ಸಿನಿಮಾ ಮಾಡುತ್ತೇನೆ ಎಣದು ಹೇಳಿ ಮುಂಗಡ ಹಣ ಪಡೆದಿದ್ದಾರೆ. ಆದರೆ ಮುಂಗಡ ಹಣ ಪಡೆದ ನಂತರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪ ಹೊರಿಸಿದ್ದರು. ಸುದೀಪ್ ಅವರ ಜೊತೆ ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಅದರಂತೆಯೇ ಮುತ್ತತ್ತಿ ಸತ್ಯರಾಜು ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು. ನಿರ್ದೇಶಕ ನಂದಕಿಶೋರ್ ಅವರನ್ನೂ ಅವರೇ ಕರೆಸಿದ್ದರು. ಅಷ್ಟೆ ಅಲ್ಲದೆ ನನ್ನಿಂದ ಇನ್ನೊಬ್ಬರಿಗೆ ಅಡ್ವಾನ್ಸ್ ಕೂಡ ಕೊಡಿಸಿದ್ದರು. ಹೈದರಾಬಾದ್ನಿಂದ ರೈಟರ್ನ ಕರೆಸಿ ಅಂದಿದ್ದರು, ಅವರು ಹೇಳಿದರೆಂದು ರೈಟರ್ನ ಕರಸಿದ್ರೆ ಅವರನ್ನು ಸುದೀಪ್ ಅವರು ಬೆಟಿ ಕೂಡ ಮಾಡಿಲ್ಲ. ಅವರ ಮನೆಗೆ ಹೋದರೆ ಮಾತಿಗೂ ಸಿಗ್ತಿಲ್ಲ ಎಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದರು.