ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನ ಸ್ಟಾರ್ ಡಮ್ ಹೊಂದಿರುವ ನಟ ಕಿಚ್ಚ ಸುದೀಪ್ ಒಬ್ಬ ಅದ್ಭುತ ನಟನಷ್ಟೇ ಅಲ್ಲ ಕ್ರೀಡಾ ಪ್ರೇಮಿಯೂ ಹೌದು. ಅದಕ್ಕೆ ಸಾಕ್ಷಿ ಕಿಚ್ಚ ಸುದೀಪ್ ಕ್ರಿಕೆಟ್ ಅಲ್ಲದೆ ನಮ್ಮ ನಾಡಿನ ಎಲ್ಲಾ ದೇಶಿಯ ಕ್ರೀಡೆಗಳನ್ನು ಪ್ರೀತಿಸಿ, ಪ್ರೋತ್ಸಾಹಿಸುತ್ತಿರುವುದು. ಈಗಾಗಲೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು ನಡೆಸಿ ಸಕ್ಸಸ್ ಫುಲ್ ಆದ ಸ್ಟಾರ್ ನಟ. ಈ ವರ್ಷದ ಪ್ರೋ ಕಬಡ್ಡಿಯ ರಾಯಭಾರಿಯಾಗಿರೋ ಕಿಚ್ಚ ಸುದೀಪ್, ಕಬಡ್ಡಿ ಆಟದ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ.
ನಿನ್ನೆಯಷ್ಟೇ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಬುಲ್ಸ್ ಕಬಡ್ಡಿ ಪಂದ್ಯಾವಳಿ ನೋಡುವುದಕ್ಕೆ ಹಾಗೂ ಬೆಂಗಳೂರು ಬುಲ್ಸ್ ತಂಡಕ್ಕೆ ಹುರಿದುಂಬಿಸೋದಿಕ್ಕೆ ಕಿಚ್ಚ ಸುದೀಪ್ ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ನನಗೆ ಕ್ರಿಕೆಟ್ ಆಟ ಅಲ್ಲದೇ ಕಬಡ್ಡಿ ಕೂಡ ನನ್ನ ಫೇವರೆಟ್ ಆಟ ಆಗಿತ್ತು. ನನ್ನ ಸ್ಕೂಲ್ ದಿನಗಳಲ್ಲಿ ಕ್ರಿಕೆಟ್ಗಿಂತ ಹೆಚ್ಚಾಗಿ ಶಿವಮೊಗ್ಗದಲ್ಲಿ ಕಬಡ್ಡಿ ಆಟ ಆಡಿದ್ದೇನೆ.
ಶಿವಮೊಗ್ಗದಲ್ಲಿ ಹೆಚ್ಚಾಗಿ ಕ್ರಿಕೆಟ್ ಟೂರ್ನಮೆಂಟ್ ಇರಲಿಲ್ಲ. ಆಗ ಕಬಡ್ಡಿ ಟೂರ್ನಮೆಂಟ್ ಜಾಸ್ತಿ ನಡೆಯುತ್ತಿದ್ದವು. ನಾನು ಸ್ಕೂಲ್ ಡೇಸ್ನಲ್ಲಿ ಕಬಡ್ಡಿ ಆಟವನ್ನು ಆಡುತ್ತಿದ್ದೆ. ಆಗ ನಾನು ಕೈ ಕಾಲಿಗೆ ಏಟು ಮಾಡಿಕೊಂಡಿದ್ದೇನೆ. ಕಬಡ್ಡಿ ನಮ್ಮ ದೇಶಿಯ ಕ್ರೀಡೆ. ಇಂತಹ ಆಟದಲ್ಲಿ ಟೀಂನಲ್ಲಿದ್ದರೆ ಅದುವೇ ದೊಡ್ಡ ಸಾಧನೆ ಎಂದು ಕಿಚ್ಚ ಸುದೀಪ್ ತಮ್ಮ ಶಾಲಾ ದಿನದ ಕಬಡ್ಡಿ ಆಟವನ್ನು ಮೆಲುಕು ಹಾಕಿದರು.