ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾವನ್ನು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಒತ್ತಾಯಿಸುತ್ತಿದ್ದರು. ಇದೀಗ ನಟನ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಭಿನಯ ಚಕ್ರವರ್ತಿಯ ಹೊಚ್ಚ ಹೊಸ ಸಿನಿಮಾದ ಟೀಸರ್ ಅನಾವರಣಗೊಂಡಿದ್ದು, ರಗಡ್ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಪಂಚಭಾಷೆಗಳಲ್ಲಿ ಸುದೀಪ್ ಸಿನಿಮಾ: ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಸೇರಿ 5 ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾದ ಪ್ರೋಮೋ ಬಿಡುಗಡೆ ಮಾಡಲಾಗಿದೆ. K46 Demon War Begins ಎಂದು ಸದ್ಯಕ್ಕೆ ಟೈಟಲ್ ಇಡಲಾಗಿದೆ. ರಿಲೀಸ್ ಆಗಿರುವ ಪ್ರೋಮೋದಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, 'ನಾನು ಮನುಷ್ಯ ಅಲ್ಲ, ರಾಕ್ಷಸ' ಎಂಬ ಡೈಲಾಗ್ ಗಮನ ಸೆಳೆಯುತ್ತಿದೆ. ಕಲೈಪುಲಿ ಎಸ್. ತನು ನಿರ್ಮಾಣದ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಲಿದ್ದಾರೆ.
'ಕಿಚ್ಚ 46': ಸೋಷಿಯಲ್ ಮೀಡಿಯಾದಲ್ಲಿ ಬಹುಕಾಲದಿಂದ 'ಕಿಚ್ಚ 46'ಎಂಬುದು ಟ್ರೆಂಡಿಂಗ್ ಆಗಿತ್ತು. ವಿಕ್ರಾಂತ್ ರೋಣ ಬಳಿಕ ಸುದೀಪ್ ಯಾವುದೇ ಸಿನಿಮಾ ಘೋಷಿಸಿರಲಿಲ್ಲ. ಸುಮಾರು ಏಳೆಂಟು ತಿಂಗಳಿಂದ ನಟನ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಸೇರಿದಂತೆ ಸಿನಿಗಣ್ಯರು ಕತೂಹಲ ವ್ಯಕ್ತಪಡಿಸಿದ್ದರು. ಈಗಾಗಲೇ ಹಲವು ಅಂತೆ ಕಂತೆಗಳು ಬಂದು ಹೋಗಿದ್ದವು. ಹಾಗಾಗಿ ನಟ ತಮ್ಮ ಮುಂದಿನ ಚಿತ್ರದ ಬಗ್ಗೆ ಶೀಘ್ರದಲ್ಲೇ ಘೋಷಿಸುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.
K46 - Demon War Begins Promo: ಕೊಟ್ಟ ಮಾತಿನಂತೆ ಜುಲೈ 2ರಂದು ಕಿಚ್ಚ 46 ಸಿನಿಮಾ ಸಂಬಂಧ ನಟ ಪ್ರೋಮೋ ವೀಡಿಯೊ ರಿಲೀಸ್ ಮಾಡಿದ್ದಾರೆ. K46 - Demon War Begins Promo ಎಂಬ ಟೈಟಲ್ನಡಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಸೇರಿ 5 ಭಾಷೆಗಳಲ್ಲಿಯೂ ಪ್ರೋಮೋ ರಿಲೀಸ್ ಮಾಡಿದ್ದು, ಚಿತ್ರದ ಶೀರ್ಷಿಕೆ ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಅನಾವರಣಗೊಂಡಿರುವ ವೀಡಿಯೊದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ರಕ್ತಸಿಕ್ತ ವಾತಾವರಣದಲ್ಲಿ ಅಬ್ಬರಿಸಿದ್ದಾರೆ. ಈ ಹಿಂದೆ ಯಾವ ಚಿತ್ರಗಳಲ್ಲೂ ಈ ಮಟ್ಟಿನ ರಗಡ್ ಲುಕ್‌ನಲ್ಲಿ ಅವರು ಅಭಿನಯಿಸಿರಲಿಲ್ಲ.