ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ ವೇಳೆ ಓರ್ವ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿದ್ದಾರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚೆನ್ನೈನಲ್ಲಿ ನಡೆಯುತ್ತಿದ್ದ ವಿಡುತಲೈ ಸಿನಿಮಾ ಶೂಟಿಂಗ್ ವೇಳೆ ಈ ದುರ್ಘಟನೆ ನಡೆದಿದೆ.
ರೈಲು ಅಪಘಾತದ ಹಿನ್ನೆಲೆಯಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಗುತ್ತಿತ್ತು. ಅದರ ಭಾಗವಾಗಿ ಬಿದ್ದ ರೈಲಿನಿಂದ ಪ್ರಯಾಣಿಕರು ಓಡುವ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಆ ವೇಳೆ 20 ಅಡಿ ಎತ್ತರದಲ್ಲಿದ್ದ ಸ್ಟಂಟ್ ಮಾಸ್ಟರ್ ಎನ್ ಸುರೇಶ್ ಅವರ ದೇಹಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿ ಅವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಸುರೇಶ್ ಜೊತೆಗೆ ಗಾಯಗೊಂಡಿರುವ ಮತ್ತೊಬ್ಬ ಸ್ಟಂಟ್ ಮಾಸ್ಟರ್ಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ:ಕಾಶ್ಮೀರ್ ಫೈಲ್ಸ್: ನಡಾವ್ ಲಪಿಡ್ ಹೇಳಿಕೆ ಬೆಂಬಲಿಸಿದ ತೀರ್ಪುಗಾರರು
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಮತ್ತು ನಟ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ತಮಿಳಿನ ಜನಪ್ರಿಯ ಹಾಸ್ಯ ನಟ ಸೂರಿ ನಾಯಕರಾಗಿ ನಟಿಸುತ್ತಿದ್ದಾರೆ. ಮತ್ತೊಬ್ಬ ಜನಪ್ರಿಯ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಸೂರಿ, ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಚೇತನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡುತ್ತಿದ್ದಾರೆ. ರಾಜ್ ಛಾಯಾಗ್ರಹಣ ಕೆಲಸ ನಿಭಾಯಿಸುತ್ತಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ 'ವಿಡುತಲೈ 1' ಮತ್ತು 'ವಿಡುತಲೈ 2' ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದೆ.