ಹಾಲಿವುಡ್ನಲ್ಲಿ 'ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ (Steven Spielberg) ಅವರನ್ನು ಭಾರತದ ಶ್ರೇಷ್ಠ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಸಂದರ್ಶನ ಮಾಡಿದ್ದಾರೆ. ಸಂದರ್ಶನನ ವೇಳೆ ಸ್ಟೀವನ್ ಸ್ಪೀಲ್‌ಬರ್ಗ್ ಅವರು ರಾಜಮೌಳಿಯವರ ಬಗ್ಗೆ ಗುಣಗಾನ ಮಾಡಿದ್ದಾರೆ. ಅವರ ಮೆಚ್ಚುಗೆಗೆ ರಾಜಮೌಳಿಯವರು ಬಹಳ ಖುಷಿಪಟ್ಟಿದ್ದಾರೆ. ಕುರ್ಚಿಯಿಂದ ಎದ್ದು ಕುಣಿಯಬೇಕು ಎಂದುಕೊಂಡಿದ್ದೇನೆ ಎನ್ನುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ದಿ ಫೇಬಲ್‌ಮ್ಯಾನ್ಸ್' (The Fabelmans) ಚಿತ್ರ ಅತ್ಯುತ್ತಮ ಚಿತ್ರವಾಗಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರ ಭಾರತದಲ್ಲಿ ಶುಕ್ರವಾರ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ಹಾಗೂ ರಾಜಮೌಳಿ ಆನ್ಲೈನ್ (ಝೂಮ್ ಕಾಲ್) ಮಾತುಕತೆ ನಡೆಸಿದ್ದಾರೆ. ಒಂದು ರೀತಿಯಲ್ಲಿ ಸಂದರ್ಶನವೇ ನಡೆದಿದೆ. ಈ ವೇಳೆ, 1976ರಲ್ಲಿ ತೆರೆಕಂಡ ‘ಕ್ಲೋಸ್ ಎನ್‌ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್’ ಸಿನಿಮಾದ ಶೂಟಿಂಗ್‌ಗಾಗಿ ಭಾರತಕ್ಕೆ ಬಂದಿದ್ದನ್ನು ಸ್ಪೀಲ್‌ಬರ್ಗ್ ನೆನಪಿಸಿಕೊಂಡರು. ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದೆ ಎಂದು ಕೂಡ ತಿಳಿಸಿದರು. ಸ್ಟೀವನ್ ಸ್ಪೀಲ್‌ಬರ್ಗ್ ಅವರೊಂದಿಗೆ ಮಾತನಾಡುವುದೇ ಒಂದು ಗೌರವ ಎಂದು ರಾಜಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಮ್ಮ 'ಆರ್‌ಆರ್‌ಆರ್' ಸಿನಿಮಾ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಚಿತ್ರವನ್ನು ವೀಕ್ಷಿಸುವಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಇದರಲ್ಲಿನ ಪ್ರತಿಯೊಂದು ಪಾತ್ರವೂ ವಿಶಿಷ್ಟವಾಗಿದೆ. ಪ್ರತೀ ದೃಶ್ಯ ಮತ್ತು ಚಿತ್ರೀಕರಣ ಅದ್ಭುತವಾಗಿದೆ ಎಂದು ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರು ಆರ್‌ಆರ್‌ಆರ್ ಬಗ್ಗೆ ಗುಣಗಾನ ಮಾಡಿದರು.
ಈ ಮೆಚ್ಚುಗೆಗೆ ಪ್ರತಿಕ್ರಿಯಿಸಿದ ನಿರ್ದೇಶಕ ರಾಜಮೌಳಿ ಅವರು, ಧನ್ಯವಾದಗಳು ಸರ್. ನೀವು ನಮ್ಮ ಚಿತ್ರವನ್ನು ನೋಡಿದ್ದಕ್ಕೆ ನಮಗೆ ಬಹಳ ಸಂತೋಷ ಆಗಿದೆ. ನಿಮ್ಮ ಹೊಗಳಿಕೆ ನನ್ನನ್ನು ಕುರ್ಚಿಯಿಂದ ಎದ್ದು ಕುಣಿಯುವಂತೆ ಮಾಡುತ್ತಿದೆ ಎಂದು ತಿಳಿಸಿದರು. ಇನ್ನು, ನಿಮ್ಮ ಹಿಂದಿನ ಎಲ್ಲಾ ಚಿತ್ರಗಳಿಗಿಂತ 'ದಿ ಫೇಬಲ್‌ಮ್ಯಾನ್ಸ್' ವಿಭಿನ್ನವಾಗಿದೆ ಎಂದು ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಸಿನಿಮಾ ಬಗ್ಗೆ ರಾಜಮೌಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಇತರರ ಕಥೆಯನ್ನು ಬಹಳಷ್ಟು ಹೇಳಿದ್ದೇನೆ. 'ನನ್ನ ಬಗ್ಗೆ ಹೇಳಬೇಕು' ಎಂಬ ಕಲ್ಪನೆಯ ಭಾಗವಾಗಿ 'ದಿ ಫೇಬಲ್‌ಮ್ಯಾನ್ಸ್' ಚಿತ್ರ ಮೂಡಿ ಬಂದಿದೆ. ನನ್ನ ಹೆತ್ತವರು, ಸಹೋದರಿಯರು ಮತ್ತು ಬೆಳೆಯುತ್ತಿರುವಾಗ ನಾನು ಎದುರಿಸಿದ ಎಲ್ಲದರ ಬಗ್ಗೆ ಹೇಳಲು ನಾನು ಬಯಸಿದೆ. ನನ್ನ ತಾಯಿ ಬಹಳ ಉನ್ನತ ವ್ಯಕ್ತಿತ್ವದವರು. ನಾನು ಅವರ ಬಗ್ಗೆ ಹೆಚ್ಚು ಪ್ರಸ್ತಾಪಿಸಿದ್ದೇನೆ ಎಂದು ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ತಿಳಿಸಿದರು. 'ದಿ ಫೇಬಲ್‌ಮ್ಯಾನ್ಸ್' ಸೀಕ್ವೆಲ್ ಬರಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ ಎಂದು ತಿಳಿಸಿದರು.