ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕಾಗಿ ಮತದಾನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಪಕ್ಕದಲ್ಲಿರೋ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತ ಚಲಾವಣೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9 ಗಂಟೆಗೆ ಫಲಿತಾಂಶ ಹೊರಬೀಳಲಿದ್ದು, ಯಾರ ಪಾಲಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಫಿಲ್ಮ್ಸ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ ಹರೀಶ್ ಹಾಗೂ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದು ಚಲನಚಿತ್ರ ವಾಣಿಜ್ಯ ಮಂಡಳಿ 64ನೇ ಚುನಾವಣೆ ಆಗಿದೆ. 3 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಇದಾಗಿದೆ. ಕೊರೊನಾ ಕಾರಣಕ್ಕಾಗಿ 3 ವರ್ಷದಿಂದ ಚುನಾವಣೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಫಿಲ್ಮ್ ಚೇಂಬರ್ ಎಲೆಕ್ಷನ್ ರಂಗೇರಿದೆ.
ಯಾರಾಗಬಹುದು ಅಧ್ಯಕ್ಷ:ಫಿಲ್ಮ್ ಚೇಂಬರ್ನ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಸ್ಯಾಂಡಲ್ವುಡ್ನಲ್ಲಿ ಮನೆ ಮಾಡಿದೆ. ಚಿತ್ರರಂಗದ ಮೂರು ವಲಯಗಳಾದ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರ ವಲಯಗಳಿಂದ ಮತದಾನ ನಡೆಯಲಿದೆ. ಒಟ್ಟು 1800ಕ್ಕೂ ಹೆಚ್ಚು ಮತದಾರರು ಇಂದು ಮತ ಚಲಾಯಿಸಲಿದ್ದಾರೆ.
ಇದೇ ಮೊದಲ ಬಾರಿಗೆ, ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವಾರ್ಷಿಕ ಸಭೆ ಹಾಗೂ ಚಿತ್ರೋದ್ಯಮದ ಪರಿಸ್ಥಿತಿಯ ಚರ್ಚೆ ಮಾಡಲಾಗುತ್ತಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜಯರಾಜ್, ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕಾರ್ಯದರ್ಶಿಗಳಾದ ಎನ್ .ಎಮ್ ಸುರೇಶ್, ಎ.ಗಣೇಶ್ ಹಾಗೂ ಪ್ರದರ್ಶಕರಾದ ಕೆವಿ ಚಂದ್ರಶೇಖರ್, ನರಸಿಂಹುಲು ಸಮ್ಮುಖದಲ್ಲಿ ಗುರುರಾಜ ಕಲ್ಯಾಣ ಮಂಟಪದಲ್ಲಿ 64ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮಾಡಲಾಯಿತು.