ಬೆಂಗಳೂರು: ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳು ಹಾಗು ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿರುವ, ಪದ್ಮಶ್ರೀ ಪುರಸ್ಕೃತ ನಟ ಮನೋಜ್ ಬಾಜ್‌ಪೇಯಿ 'ಜೋರಾಮ್' ಎಂಬ ಆದಿವಾಸಿಗಳ ಭೂ ಸಂಘರ್ಷದ ಕಥೆಯಾಧಾರಿತ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಡಳಿತದಿಂದ ತೊಂದರೆಗಳನ್ನು ಅನುಭವಿಸುವ ಸಮಾಜಮುಖಿ ಕಥನವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಯಿಸಲು ಸಿನಿಮಾ ತಂಡ ಮುಂದಾಗಿದ್ದು, ಪ್ರಚಾರದ ಸಲುವಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಜೋರಾಮ್ ಸಿನಿಮಾ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ಜೋರಾಮ್ ಸಿನಿಮಾವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರೋಟರ್‌ಡ್ಯಾಮ್, ಸಿಡ್ನಿ ಚಲನಚಿತ್ರೋತ್ಸವ, ಡರ್ಬನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, 28ನೇ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು 59ನೇ ಚಿಕಾಗೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗಿತ್ತು. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ. ಡಿಸೆಂಬರ್ 8ಕ್ಕೆ ಹಿಂದಿ ಭಾಷೆಯಲ್ಲಿ ಚಿತ್ರ ದೇಶದೆಲ್ಲೆಡೆ ಬಿಡುಗಡೆ ಆಗಲಿದೆ.
ಪತ್ರಕರ್ತರ ಕ್ಷಮೆ ಯಾಚಿದ ನಟ: ಸಿನಿಮಾ ಪ್ರಮೋಷನ್ಗೆ ತಡವಾಗಿ ಬಂದ ಕಾರಣಕ್ಕೆ ಮನೋಜ್ ಬಾಜ್‌ಪೇಯಿ ಪತ್ರಕರ್ತರಲ್ಲಿ ಕ್ಷಮೆ ಕೇಳಿದರು. ಬಳಿಕ ಮಾತನಾಡಿದ ಅವರು, "ಬೆಂಗಳೂರು ಬಗ್ಗೆ ನನಗೆ ಸ್ಪಲ್ಪ ಗೊತ್ತಿದೆ. ನನ್ನ ಪೂರ್ವಜರು ಕರ್ನಾಟಕದವರು. ಕನ್ನಡ ಚಿತ್ರರಂಗ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅದರಲ್ಲೂ 'ಗರುಡ ಗಮನ ವೃಷಭ ವಾಹನ', 'ಕಾಂತಾರ' ಚಿತ್ರಗಳನ್ನು ನೋಡಿದ್ದೇನೆ. ಅದು ನನ್ನನ್ನು ತುಂಬಾ ಕಾಡಿದೆ. ಇಂತಹ ಚಿತ್ರಗಳು ನನಗೆ ಧೈರ್ಯ, ಸ್ಪೂರ್ತಿ ತುಂಬುತ್ತದೆ" ಎಂದರು.