ಅದ್ಧೂರಿ ಮೇಕಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಮಾ ಪ್ರಿಯರನ್ನ ಆಕರ್ಷಿಸುತ್ತಿವೆ. ಇಂಥದ್ದೇ ಕಂಟೆಂಟ್ ಹೊಂದಿರುವ 'ಸಾರಾಂಶ' ಶೀರ್ಷಿಕೆಯ ಸಿನಿಮಾವೊಂದು ಪ್ರೇಕ್ಷಕರೆದುರು ಬರುತ್ತಿದೆ. ಈ ಚಿತ್ರವನ್ನು ಬಹುಮುಖ ಪ್ರತಿಭೆ ಸೂರ್ಯ ವಸಿಷ್ಠ ನಿರ್ದೇಶಿಸಿದ್ದಾರೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವೊಂದನ್ನು ಬಚ್ಚಿಟ್ಟುಕೊಂಡಂತಿರೋ ಈ ಸಿನಿಮಾ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗುವ ಕಾತರದಲ್ಲಿದೆ.
ಬಹಳ ದಿನಗಳ ಬಳಿಕ ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿರೋ ಸಾರಾಂಶ ಚಿತ್ರ ತನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಕಥೆಯಿದು. ಆ ಪಾತ್ರವನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬಂಥ ಸೂಕ್ಷ್ಮ ಕದಲಿಕೆಯ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ. ಸದ್ಯಕ್ಕೆ ನಿರ್ದೇಶಕರು ಇವಿಷ್ಟು ವಿಚಾರವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ, ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರ್ಗೆ ಈ ಸಿನಿಮಾ ಒಳಪಡಲಿದೆ ಎಂಬ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ.
ಇನ್ನುಳಿದಂತೆ, ಈ ಚಿತ್ರದ ಚಿತ್ರೀಕರಣವನ್ನು ಅಂದುಕೊಂಡಂತೆ ವ್ಯವಸ್ಥಿತವಾಗಿ ಚಿತ್ರತಂಡ ಮುಗಿಸಿಕೊಂಡಿದೆ. ಇಲ್ಲಿ ಬಹುಮುಖ್ಯವಾಗಿ ನಾಲ್ಕು ಪಾತ್ರಗಳ ಸುತ್ತ ಕಥೆ ಚಲಿಸುತ್ತದೆ. ಈ ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಆ ದಿನಗಳು, ತಮಸ್ಸು, ಮಠ ಸೇರಿದಂತೆ ಮೊದಲಾದ ಸಿನಿಮಾಗಳ ಮೂಲಕ ಖ್ಯಾತರಾಗಿರೋ ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.