ಹೈದರಾಬಾದ್: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರಕ್ಕಾಗಿ ತಮಿಳು ನಿರ್ದೇಶಕ ಅರುಣ್ ಕುಮಾರ್ ಅಕಾ ಆಟ್ಲೀ ಅವರೊಂದಿಗೆ ಕೈಜೋಡಿಸಿದ್ದಾರೆ. ಸಕಾರಾತ್ಮಕ ರೀತಿಯಲ್ಲೇ ಫೇಮಸ್ ಆಗಿದ್ದ ಬಹು ನಿರೀಕ್ಷಿತ ಚಿತ್ರ ಜವಾನ್ ಇದೀಗ ತೊಂದರೆಗೆ ಸಿಲುಕಿದೆ.
ಅಟ್ಲೀ ತಮಿಳು ಸಿನಿಮಾವನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಚಿತ್ರ ನಿರ್ಮಾಪಕ ಮಾಣಿಕ್ಕಂ ನಾರಾಯಣ್ ಅವರು ಜವಾನ್ ವಿರುದ್ಧ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (TFPC) ಯಲ್ಲಿ ದೂರು ದಾಖಲಿಸಿದ್ದಾರೆ. ಈ ಚಿತ್ರವು 2006 ರ ಪೆರರಸು ಸಿನಿಮಾದ ಕಥೆಯನ್ನು ಆಧರಿಸಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ TFPC ಯು ತನಿಖೆಗೆ ಒಪ್ಪಿಕೊಂಡಿದ್ದು, ನವೆಂಬರ್ 7 ರ ನಂತರ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಪೆರರಸು ಸಿನಿಮಾದಲ್ಲಿ ಉದಯನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜವಾನ್ ಸಿನಿಮಾದಲ್ಲೂ ಶಾರುಖ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಜವಾನ್ ತಮಿಳು ಸಿನಿಮಾದ ರಿಮೇಕ್ ಆಗಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಟ್ಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.