ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ್ಯಭೂಮಿಕೆಯ 'ಡಂಕಿ' ಸಿನಿಮಾ ಡಿಸೆಂಬರ್ 21 ರಂದು ತೆರೆಗಪ್ಪಳಿಸಿ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಎಸ್ಆರ್ಕೆ ಅಭಿನಯದ ಕಳೆದ ಪಠಾಣ್ ಮತ್ತು ಜವಾನ್ ಸಿನಿಮಾಗಳಿಗೆ ಹೋಲಿಸಿದರೆ ಡಂಕಿ ಚಿತ್ರದ ಗಳಿಕೆ ಕೊಂಚ ಕಡಿಮೆ ಎನಿಸಿದರೂ, ಈವರೆಗಿನ ಬಾಕ್ಸ್ ಆಫೀಸ್ ಸಂಖ್ಯೆ ಉತ್ತಮವಾಗಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಕಳೆದ ದಿನ 3.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈವರೆಗೆ ದೇಶೀಯ ಮಾರುಕಟ್ಟೆಯಲ್ಲಿ 200.62 ಕೋಟಿ ರೂ.ನ ವ್ಯವಹಾರ ನಡೆಸಿದೆ. ವಿಶ್ವದಾದ್ಯಂತ 400 ಕೋಟಿ ರೂ. ಗಡಿ ದಾಟಿದೆ. ಪಠಾಣ್ ಮತ್ತು ಜವಾನ್ 1,000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಡಂಕಿ ಬಾಕ್ಸ್ ಆಫೀಸ್ ಕಲೆಕ್ಷನ್ ಇಳಿಕೆ ಕಂಡಿದ್ದರೂ, ಟ್ರೆಂಡ್ ಗಮನಿಸಿದರೆ ಈ ಸಿನಿಮಾ ವಿಶ್ವದಾದ್ಯಂತ 500 ಕೋಟಿ ರೂ. ಸಮೀಪಿಸುವ ನಿರೀಕ್ಷೆ ಇದೆ. ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ಚೆನ್ನೈ ಎಕ್ಸ್‌ಪ್ರೆಸ್ ಒಟ್ಟು 423 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಡಂಕಿ ಈ ಅಂಕಿ ಅಂಶವನ್ನು ಮೀರಿಸುವ ಸಾಧ್ಯತೆ ಇದೆ ಅಂತಾರೆ ಸಿನಿ ಪಂಡಿತರು. ಆದ್ರೆ, ಕಳೆದ ವರ್ಷ ಕಿಂಗ್ ಖಾನ್ ನಟನೆಯ ಜವಾನ್ ಮತ್ತು ಪಠಾಣ್ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಡಂಕಿ ಕೊಂಚ ಹಿನ್ನೆಡೆ ಕಂಡಿದೆ.
ಡಂಕಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿಯವರ ಸಂಜು ಸಿನಿಮಾ ಸೂಪರ್ ಹಿಟ್ ಆಗಿ ದೇಶೀಯವಾಗಿ 342 ಕೋಟಿ ರೂ. ಮತ್ತು ಜಾಗತಿಕವಾಗಿ 586 ಕೋಟಿ ರೂ. ಗಳಿಸಿತ್ತು. ಈ ಅಂಕಿ ಅಂಶ ತಲುಪೋದು ಕೊಂಚ ಕಷ್ಟ. ಪ್ರಸ್ತುತ ಆ್ಯಕ್ಷನ್ ಸಿನಿಮಾಗಳು ಚಾಲ್ತಿಯಲ್ಲಿದ್ದು, 'ಡಂಕಿ' ಕೋವಿಡ್ ಬಳಿಕ 'ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕಾಮಿಡಿ ಸಿನಿಮಾ'ವಾಗಿ ಹೊರಹೊಮ್ಮಲು ಸಜ್ಜಾಗಿದೆ. ಡಂಕಿ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 409.89 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಎಸ್ಆರ್ಕೆ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಘೋಷಿಸಿದೆ.