ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರಿಗೆ ಈ ವರ್ಷ ಬಹಳಾನೇ ವಿಶೇಷ. ನಾಲ್ಕು ವರ್ಷಗಳ ಬ್ರೇಕ್ ಬಳಿಕ ಬಂದ ಶಾರುಖ್ 2023ರಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಈಗಾಗಲೇ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಪಠಾಣ್, ಜವಾನ್ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂ. ಗಳಿಸುವಲ್ಲಿ ಯಶ ಕಂಡಿದೆ. ಡಿಸೆಂಬರ್ನಲ್ಲಿ ತೆರೆಕಾಣಲು ಸಜ್ಜಾಗುತ್ತಿರುವ ಡಂಕಿ ಸಿನಿಮಾದ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಒಂದು ವೇಳೆ ಡಂಕಿ ಕೂಡ ಸಾವಿರ ಕೋಟಿ ರೂ. ಸಂಪಾದಿಸಿದರೆ ಅದು ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಇತಿಹಾಸ ಆಗಲಿದೆ.
ಗದರ್ 2 VS ಜವಾನ್:ಈ ವರ್ಷಾರಂಭದಲ್ಲಿ ತೆರೆಕಂಡ 'ಪಠಾಣ್' ಚಿತ್ರ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಗುರುವಾರದಂದು, ಸನ್ನಿ ಡಿಯೋಲ್ ಅವರ ಇತ್ತೀಚಿನ ಸೂಪರ್ ಹಿಟ್ 'ಗದರ್ 2' ಸಿನಿಮಾ ಹಿಂದಿನ 'ಪಠಾಣ್' ದಾಖಲೆಯನ್ನು ಪುಡಿಗಟ್ಟಿತು. ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಸಿನಿಮಾ 'ಪಠಾಣ್' ದಾಖಲೆಯನ್ನು ಮೀರಿಸಿದ ಒಂದೇ ದಿನದ ಅಂತರದಲ್ಲಿ ಶಾರುಖ್ ಖಾನ್ ಅವರ ಇತ್ತೀಚಿನ ಸಿನಿಮಾ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಗದರ್ 2 ತೆರೆಕಂಡು ಸರಿಸುಮಾರು ಒಂದು ತಿಂಗಳ ನಂತರ ಬಿಡುಗಡೆಯಾದ ಬಹುನಿರೀಕ್ಷಿತ ಜವಾನ್ ಸಿನಿಮಾ ಈಗ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿದೆ.
ಜವಾನ್ ಸಿನಿಮಾ ನಿರ್ಮಾಣ ಮಾಡಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ಜವಾನ್ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡಿದೆ. ಫೈರ್ ಎಮೋಜಿಯೊಂದಿಗೆ ''ಓರ್ವ ರಾಜ, ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಜವಾನ್. ಎಲ್ಲ ದಾಖಲೆಗಳ ರಾಜ. ಸಿನಿಮಾದ ಜಾಗತಿಕ ಕಲೆಕ್ಷನ್ 1043 ಕೋಟಿ ರೂ.'' ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಪಠಾಣ್ ಹಿಂದಿಕ್ಕಿದ ಸನ್ನಿ ಡಿಯೋಲ್ ಅವರ 'ಗದರ್ 2' ಸ್ಥಾನವನ್ನೀಗ ಜವಾನ್ ಆಕ್ರಮಿಸಿದೆ. ಬಿಗ್ ಸ್ಟಾರ್ ಕಾಸ್ಟ್ ಹೊಂದಿದ 'ಜವಾನ್' ಹಿಂದಿಯಲ್ಲಿ 584 ಕೋಟಿ ರೂ. ಗಳಿಸಿದೆ. 'ಪಠಾಣ್' ಕಲೆಕ್ಷನ್ 524.53 ಕೋಟಿ ರೂ.