ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 2023 ಬಹಳ ವಿಶೇಷ ವರ್ಷವಾಗುತ್ತಿದೆ. ನಾಲ್ಕು ವರ್ಷಗಳ ವಿರಾಮದ ನಂತರ ಪಠಾಣ್ ಚಿತ್ರದೊಂದಿಗೆ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ ಇವರು ಗೆಲುವಿನ ನಗೆ ಬೀರಿದ್ದರು. ಹಲವರ ಕೆಂಗಣ್ಣಿಗೂ ಗುರಿಯಾಗಿ ತೆರೆಕಂಡ ಚಿತ್ರ ವಿಶ್ವಾದ್ಯಂತ 1,050 ಕೋಟಿ ರೂ. ಮೀರಿ ಕಲೆಕ್ಷನ್ ಮಾಡಿತ್ತು.
ಇದೀಗ ಟೈಮ್(TIME) ನಿಯತಕಾಲಿಕೆ 2023ರ ಟೈಮ್ 100 ರೀಡರ್ ಮತದಾನದಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಶ್ರೇಯಾಂಕ ಹೊಂದಿದೆ. ಆಸ್ಕರ್ ವಿಜೇತ ನಟ ಮಿಚೆಲ್ ಯೋಹ್, ಅಥ್ಲೀಟ್ ಸೆರೆನಾ ವಿಲಿಯಮ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಂತಹ ಗಣ್ಯ ವ್ಯಕ್ತಿಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಭಾರತದ ಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸಿರುವ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಒಂದು ಪ್ರಕಟಣೆಯ ಪ್ರಕಾರ, ಮತದಾನದಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಈ ಪೈಕಿ ಶಾರುಖ್ ಶೇ. 4ಕ್ಕೂ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ತಮ್ಮ ದೇಶದಲ್ಲಿ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಶೇ.3ರಷ್ಟು ಮತಗಳೊಂದಿಗೆ ಇರಾನ್ ಮಹಿಳೆಯರು 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನ ಆರೋಗ್ಯ ಕಾರ್ಯಕರ್ತರಿಗೆ ದಕ್ಕಿದೆ. ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ 4 ನೇ ಸ್ಥಾನ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದಾರೆ.