ಶೀರ್ಷಿಕೆಯಿಂದಲೇ ಚಂದನವನದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ 'ಗೌಳಿ'. ನಟ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಉದ್ದ ತಲೆಕೂದಲು ಬಿಟ್ಟು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಬಹುನೀರಿಕ್ಷಿತ ಚಿತ್ರ. ಯುವ ನಿರ್ದೇಶಕ ಸೂರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗೌಳಿ ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು 'ಸ್ಯಾಂಡಲ್ವುಡ್ ಅಧ್ಯಕ್ಷ' ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಅನಾವರಣಗೊಂಡಿರುವ ಟ್ರೇಲರ್ ಪ್ರೇಕ್ಷಕರ ಪ್ರಶಂಸೆ ಗಳಿಸುತ್ತಿದೆ.
ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶರಣ್ ಮಾತನಾಡಿ, ಅದ್ಭುತ ಮೇಕಿಂಗ್ ಅನ್ನು ಟ್ರೇಲರ್ನಲ್ಲಿ ಕಂಡೆ. ಈ ರೀತಿಯ ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಟ್ರೇಲರ್ ನೋಡುವಾಗ ಪ್ರತಿ ಫ್ರೇಮ್ನಲ್ಲೂ ನಿರ್ದೇಶಕರ ಕನಸು ಕಂಡೆ. ಅವರ ಕನಸಿಗೆ ತಂಡದ ಶ್ರಮ ಕೊಡ ಅಷ್ಟೇ ಇದೆ. ಶ್ರೀನಗರ ಕಿಟ್ಟಿ ಒಳ್ಳೆಯ ಕಲಾವಿದ. ಅಷ್ಟೇ ಅಲ್ಲ ಒಳ್ಳೆ ವ್ಯಕ್ತಿ ಕೂಡ. ಚಿತ್ರದಲ್ಲಿ ಡಿಗ್ಲಾಮ್ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ರೀತಿಯ ಸಿನಿಮಾಗಳು ಗೆದ್ದಾಗ ಇನ್ನಷ್ಟು ಚಿತ್ರಗಳು ಮೂಡಿ ಬರುತ್ತವೆ ಎಂದು ಹೇಳಿ ಮತ್ತೊಮ್ಮೆ ಟ್ರೇಲರ್ ಪ್ಲೇ ಮಾಡಿಸಿ ಖುಷಿಪಟ್ಟರು. ಗೌಳಿಗರ ಜನಾಂಗಕ್ಕೆ ಸಂಬಂಧಿಸಿದ ಕಥಾಹಂದರ ಒಳಗೊಂಡ ಸಿನಿಮಾದಲ್ಲಿ ಶಿರಸಿ ಸುತ್ತಮುತ್ತಲಿನ ಭಾಷೆ ಬಳಸಿರುವುದು ವಿಶೇಷ.
ನಟ ಶ್ರೀನಗರ ಕಿಟ್ಟಿ ಮಾತನಾಡಿ, ಕಾತುರದ ಕ್ಷಣ ರಿವೀಲ್ ಆಯ್ತು. ಇದು ಎಲ್ಲರ ಪ್ರಯತ್ನದ ಸಿನಿಮಾ. ಈ 'ಗೌಳಿ' ಜೊತೆಗೆ ತಂತ್ರಜ್ಞರೆಲ್ಲ ಬದುಕಿದ್ದಾರೆ. ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ. ಈ ಚಿತ್ರದಿಂದ ಎಲ್ಲವೂ ಅರಿವಿಗೆ ಬಂತು. ಯುವ ನಿರ್ದೇಶಕ ಸೂರ ಬಂದು ಈ ಕಥೆ ಹೇಳಿದಾಗ ಮೈ ಜುಮ್ ಎನಿಸಿತ್ತು ಎಂದು ಹೇಳಿದರು. ಇನ್ನೂ ಟ್ರೇಲರ್ನಲ್ಲಿ ಶ್ರೀನಗರ ಕಿಟ್ಟಿ ಸುಟ್ಟು ಹೋಗೋನಲ್ಲ ಸುಡೋವ್ನು ಎನ್ನುವ ಖಡಕ್ ಡೈಲಾಗ್ ಸಖತ್ ಪಂಚಿಂಗ್ ಆಗಿದೆ.