ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ನೆರೆಯ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಶ್ರೀಲಂಕಾ ಡೆಪ್ಯೂಟಿ ಹೈಕಮಿಷನರ್ ಆಹ್ವಾನಿಸಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ರಜನಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಡೆಪ್ಯೂಟಿ ಹೈಕಮಿಷನರ್ ಡಾ.ಡಿ.ವೆಂಕಟೇಶ್ವರನ್ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ರಜನಿಕಾಂತ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ನಟನಿಗೆ ವಿಶೇಷ ಆಹ್ವಾನ ನೀಡಿದರು.
ರಜನಿಕಾಂತ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ವಿವಿಧೆಡೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶ್ರೀಲಂಕಾದಲ್ಲಿ ಸಹ ಅಲ್ಲಿನ ಜನರು ರಜನಿ ಅವರನ್ನು ಬಹಳವಾಗಿ ಇಷ್ಟಪಡುತ್ತಾರೆ, ಬೆಂಬಲಿಸುತ್ತಾರೆ. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯ ಪದ್ಮಭೂಷಣ ಪುರಸ್ಕೃತ ನಟನನ್ನು ಹೆಚ್ಚಾಗಿ ಅನುಸರಿಸುತ್ತದೆ. ಅಲ್ಲಿನ ಅಧಿಕಾರಿಗಳು ಕೂಡಾ ರಜನಿ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಉಪಸ್ಥಿತಿಯು ಶ್ರೀಲಂಕಾದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಲಂಕಾ ರಾಜತಾಂತ್ರಿಕ ಅಧಿಕಾರಿಗಳದ್ದು.
ಬಹುಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ರಜನಿಕಾಂತ್ ಅವರು ನಮ್ಮ ದೇಶಕ್ಕೆ ಬಂದರೆ, ಅವರ ಉಪಸ್ಥಿತಿಯು ಸಿನಿಮಾ ಪ್ರೇರಿತ ಪ್ರವಾಸೋದ್ಯಮದ ಜೊತೆಗೆ ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಅಭಿವೃದ್ಧಿ ಆಗುತ್ತದೆ ಎಂದು ಡಾ. ಡಿ. ವೆಂಕಟೇಶ್ವರನ್ ಹೇಳಿದರು. ಶ್ರೀಲಂಕಾದಲ್ಲಿಯೇ ಇರುವ 'ramayana trail' (ಇದು 11 ದಿನಗಳು, 10 ರಾತ್ರಿಗಳ ತೀರ್ಥಯಾತ್ರೆಯ ಪ್ರವಾಸದ ಪ್ಯಾಕೇಜ್. ವನವಾಸದ ಸಮಯದಲ್ಲಿ ಭಗವಾನ್ ರಾಮನ ಪ್ರಯಾಣದ ವಿವರಗಳನ್ನು ತಿಳಿಯಲು ಈ ಪ್ರಯಾಣ ನಿಮಗೆ ಅವಕಾಶ ನೀಡುತ್ತದೆ) ಜನರಿಗೆ ಮತ್ತಷ್ಟು ಪರಿಚಯಿಸುವ ಉದ್ದೇಶದಿಂದಲೂ ರಜನಿಕಾಂತ್ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಅಲ್ಲಿ ಇತರೆ ಪುರಾತನ ಬೌದ್ಧ ತಾಣಗಳಿವೆ. ಅವುಗಳಿಗೂ ಸಹ ಪ್ರಚಾರದ ಅಗತ್ಯವಿದೆ.