ಟಾಲಿವುಡ್ ಚಿತ್ರರಂಗದ ನಿಖಿಲ್ ಸಿದ್ದಾರ್ಥ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಸ್ಪೈ' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸಿನಿಮಾವನ್ನು ನಿರ್ದೇಶಕ ಹಾಗೂ ಸಂಕಲನಕಾರ ಗ್ಯಾರಿ ಬಿ.ಹೆಚ್. ನಿರ್ದೇಶನ ಮಾಡಿದ್ದಾರೆ. ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಅವರು ಇಡೀ ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಭಾರತದ ಟಾಪ್ ಸೀಕ್ರೆಟ್, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಾಚಾರಿ ಪಾತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ. ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಹುಬಲಿ ಬಲ್ಲಾಳದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಂಡಿದ್ದಾರೆ.
ಪ್ರೇಕ್ಷಕರಿಂದ ಪಾಸಿಟಿವ್ ಟಾಕ್:ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ ಸ್ಪೈ ಚಿತ್ರ ಪ್ರಸ್ತುತ ಪಾಸಿಟಿವ್ ಟಾಕ್ ಪಡೆಯುತ್ತಿದೆ. ಅದರಲ್ಲೂ ಈ ಸಿನಿಮಾದ ಸ್ಟೋರಿ ಲೈನ್ ಚೆನ್ನಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇಲ್ಲಿಯವರೆಗೆ ತೆರೆ ಕಾಣದ ವಿಭಿನ್ನ ವಿಷಯವನ್ನು ನಿರ್ದೇಶಕರು ಚಿತ್ರೀಕರಿಸಿರುವ ರೀತಿ ಚೆನ್ನಾಗಿದೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ.
ನೇತಾಜಿ ಅವರ ಸುತ್ತ ನಡೆಯುವ ಕಥೆ ಕುತೂಹಲಕರವಾಗಿದ್ದು, ಕಾಲಕಾಲಕ್ಕೆ ಪ್ರೇಕ್ಷಕರಲ್ಲಿ ಸಸ್ಪೆನ್ಸ್ ಹೆಚ್ಚಿಸುತ್ತಿದೆ. ಆದರೆ ಅವರಿಗೆ ತಕ್ಕಂತೆ ಸಾಹಸ ದೃಶ್ಯಗಳ ಗುಣಮಟ್ಟ ಹೆಚ್ಚಿಸಿದ್ದರೆ ಚೆನ್ನಾಗಿತ್ತು ಎಂಬುದು ಕೆಲವರ ಅಭಿಪ್ರಾಯ. ರಾ ಏಜೆಂಟ್ ಆಗಿ ನಿಖಿಲ್ ಅವರ ಆ್ಯಕ್ಷನ್ ಅದ್ಭುತವಾಗಿದೆ. ಜೊತೆಗೆ ಸಾಹಸ ದೃಶ್ಯಗಳೂ ಚೆನ್ನಾಗಿವೆ. ಸಿನಿಮಾಟೋಗ್ರಫಿ ಹಾಗೂ ನಿರ್ದೇಶನದ ಬಗ್ಗೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.