ಕರ್ನಾಟಕ

karnataka

ETV Bharat / entertainment

ಗೆಲುವಿನ 'ಖುಷಿ' ಹಂಚಿದ ವಿಜಯ್​ ದೇವರಕೊಂಡ; 100 ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಹಂಚಿಕೆ! - ಈಟಿವಿ ಭಾರತ ಕನ್ನಡ

'ಖುಷಿ' ಸಿನಿಮಾ ಸಕ್ಸಸ್​ ಈವೆಂಟ್​ನಲ್ಲಿ ನಟ ವಿಜಯ್​ ದೇವರಕೊಂಡ 100 ಅರ್ಹ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿಯ ಚೆಕ್​ ಹಸ್ತಾಂತರಿಸಿದ್ದಾರೆ.

Vijay Deverakonda
ವಿಜಯ್​ ದೇವರಕೊಂಡ

By ETV Bharat Karnataka Team

Published : Sep 15, 2023, 8:03 PM IST

ಸೌತ್ ಸಿನಿಮಾ ಇಂಡಸ್ಟ್ರಿಯ​ ಜನಪ್ರಿಯ ನಟರಾದ ವಿಜಯ್​ ದೇವರಕೊಂಡ ಮತ್ತು ಸಮಂತಾ ರುತು ಪ್ರಭು ಅಭಿನಯದ 'ಖುಷಿ' ಸಿನಿಮಾ ಸೆಪ್ಟೆಂಬರ್ 1ರಂದು ತೆರೆಕಂಡಿತ್ತು. ಬಿಡುಗಡೆಯಾದ ಆರಂಭದ ದಿನಗಳಿಂದಲೂ ಉತ್ತಮ ಕಲೆಕ್ಷನ್​ ಜೊತೆ ಚಿತ್ರವು ಹೆಚ್ಚು ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗೆದ್ದ 'ಖುಷಿ'ಯಲ್ಲಿ ಚಿತ್ರತಂಡವಿದೆ. ಯುಎಸ್​ ಬಾಕ್ಸ್​ಆಫೀಸ್​ನಲ್ಲಿ ಸಿನಿಮಾ ವಿಶೇಷವಾಗಿ ಪ್ರದರ್ಶನ ಕಾಣುತ್ತಿದೆ.

ಸೆಪ್ಟೆಂಬರ್​ 4ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 'ಖುಷಿ' ಸಕ್ಷಸ್​ ಸೆಲೆಬ್ರೇಶನ್​ ನಡೆದಿತ್ತು. ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟ ಸರ್ವರಿಗೂ ನಾಯಕ ನಟ ವಿಜಯ್​ ದೇವರಕೊಂಡ ಕೃತಜ್ಞತೆ ಸಲ್ಲಿಸಿದ್ದರು. ಮಾತ್ರವಲ್ಲದೇ, ಅನಿರೀಕ್ಷಿತ ಘೋಷಣೆ ಮೂಲಕ ಜನರ ಮನ ತಲುಪಿದ್ದರು. ತಮ್ಮ ಅಭಿಮಾನಿಗಳಿಗೆ ತಮ್ಮ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸಿದ ಬಳಿಕ, 100 ಅರ್ಹ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದರು. ಇದಕ್ಕಾಗಿ, ಖುಷಿ ಸಿನಿಮಾದ ತಮ್ಮ ಸಂಪಾದನೆಯಿಂದ 1 ಕೋಟಿ ರೂ. ನೀಡುವುದಾಗಿ ಬಹಿರಂಗಪಡಿಸಿದ್ದರು.

ಇದೀಗ ಕೊಟ್ಟ ಮಾತಿನಂತೆ ವಿಜಯ್​ ದೇವರಕೊಂಡ ನಡೆದುಕೊಂಡಿದ್ದಾರೆ. ಇಂದು ನಡೆದ ಸಿನಿಮಾ ಸಕ್ಸಸ್​ ಮೀಟಿಂಗ್​ನಲ್ಲಿ 100 ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿಯ ಚೆಕ್​ ಅನ್ನು ಹಸ್ತಾಂತರಿಸಿದ್ದಾರೆ. ಈವೆಂಟ್​ನ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಜಯ್​ ದೇವರಕೊಂಡ, ಈ ಕೆಲಸದಿಂದ ಸಂತೋಷ ಮತ್ತು ತೃಪ್ತಿ ಹೊಂದಿರುವುದಾಗಿ ಹೇಳಿದ್ದಾರೆ.

"#SpreadingKushi done. ನಾನು ಈಗ ಸಂತೋಷ ಮತ್ತು ತೃಪ್ತಿ ಹೊಂದಿದ್ದೇನೆ. ನೀವೂ ಕೂಡ ಸಂತಸರಾಗಿದ್ದೀರಿ ಎಂದು ಭಾವಿಸುತ್ತೇನೆ. ಈ ಸಮಯದಲ್ಲಿ ನಾನು ಎಲ್ಲರನ್ನೂ ತಲುಪಲು ಸಾಧ್ಯವಾಗಲಿಲ್ಲ. ನಾನು ಎಲ್ಲಿಯವರೆಗೆ ಆರೋಗ್ಯವಾಗಿರುತ್ತೇನೋ, ಕೆಲಸ ಮಾಡಿ ಜೀವನ ಸಾಗಿಸುತ್ತೇನೋ ಅಲ್ಲಿಯವರೆಗೆ ಪ್ರತಿ ವರ್ಷ ಇಂತಹದ್ದು ಏನಾದರೊಂದು ಮಾಡುತ್ತೇನೆ. ಸ್ಟ್ರಾಂಗ್​ ಆಗಿರಿ, ಮುಂದೆ ಸಾಗಿರಿ ಮತ್ತು ಎಲ್ಲವೂ ಒಳ್ಳೆಯದ್ದೇ ಆಗುತ್ತದೆ" ಎಂದು ಬರೆದುಕೊಂಡಿದ್ದಾರೆ.

ನಟನ ಈ ಉದಾರತೆಯ ಸ್ವಭಾವ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಅವರು ತಮ್ಮ ಲಕ್ಕಿ ಫ್ಯಾನ್ಸ್​ ಅನ್ನು ಮನಾಲಿ ಟ್ರಿಪ್​ಗೆ ಕಳುಹಿಸಿದ್ದರು. ಅಲ್ಲಿನ ಎಲ್ಲಾ ಖರ್ಚುಗಳನ್ನು ಸ್ವತಃ ನಟನೇ ಭರಿಸಿದ್ದರು. ಈ ರೀತಿಯ ಕೆಲಸಗಳು ನಟನನ್ನು ಪ್ರೀತಿಸುವ, ಬೆಂಬಲಿಸುವವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅವರ ಬದ್ಧತೆಗೆ ಹೊಂದಿಕೆಯಾಗುತ್ತವೆ. ಇದು ತಮ್ಮ ಕಟ್ಟಾ ಅಭಿಮಾನಿಗಳಿಗೆ ಹಿಂದಿರುಗಿ ಏನಾದರು ಕೊಡಬೇಕೆಂಬ ನಟನ ಸ್ವಭಾವದ ಕುರಿತು ಒತ್ತಿ ಹೇಳುತ್ತದೆ. ವೃತ್ತಿಜೀವನದುದ್ದಕ್ಕೂ ತಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ ನಟ ಪ್ರೀತಿ ತೋರಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.

ಖುಷಿ ಸಿನಿಮಾ ಸೆಪ್ಟೆಂಬರ್​ 1ರಂದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಯಿತು. ಇದನ್ನು ಮೈತ್ರಿ ಮೂವೀ ಮೇಕರ್ಸ್​ ಬ್ಯಾನರ್​ ಅಡಿಯಲ್ಲಿ ಶಿವ ನಿರ್ವಾಣ ಬರೆದು ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮಹಾನಟಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಮಂತಾ ಮತ್ತು ವಿಜಯ್​ ಜೋಡಿ ಖುಷಿ ಚಿತ್ರದಲ್ಲಿ ಎರಡನೇ ಬಾರಿ ತೆರೆಹಂಚಿಕೊಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಮಜಿಲಿ ನಂತರ ಶಿವ ನಿರ್ವಾಣ ಜೊತೆ ಸಮಂತಾ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:Kushi success: ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಖುಷಿ ನಟ ವಿಜಯ್​ ದೇವರಕೊಂಡ

ABOUT THE AUTHOR

...view details