ಪ್ರೀಮಿಯರ್ ಪದ್ಮಿನಿ ಖ್ಯಾತಿಯ ನಟ ವಿವೇಕ್ ಸಿಂಹ ಹಾಗೂ ದಿಯಾ ಜನಪ್ರಿಯತೆಯ ಖುಷಿ ರವಿ ಮುಖ್ಯಭೂಮಿಕೆಯ ಸ್ಪೂಕಿ ಕಾಲೇಜ್ ಸಿನಿಮಾದ ಟ್ರೈಲರ್ ಅನಾವರಣವಾಗಿದೆ. ಇದೊಂದು ಸಸ್ಪೆನ್ಸ್, ಹಾರರ್ ಕಥೆ ಹೊಂದಿರುವ ಸಿನಿಮಾ ಅನ್ನೋದು ಟ್ರೈಲರ್‌ನಿಂದ ಗೊತ್ತಾಗುತ್ತದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡದವರು ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡಿದರು.
ನಟಿ ಖುಷಿ ರವಿ ಮಾತನಾಡಿ, 'ವಿವೇಕ್ ಸಿಂಹ ಹಾಗೂ ನಾನು ಕಾಲೇಜು ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದೇವೆ. ಚಿತ್ರದಲ್ಲಿ ನನ್ನದು ಹೆದರಿಸುವ ಪಾತ್ರ' ಎಂದರು. 'ನಾನು ಹೀರೋ ಆಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಇದಕ್ಕೆ ಕಾರಣ ನಿರ್ಮಾಪಕ ಪ್ರಕಾಶ್ ಹಾಗೂ ನಿರ್ದೇಶಕ ಭರತ್ ಜಿ' ಎಂದು ನಟ ವಿವೇಕ್ ಸಿಂಹ ತಿಳಿಸಿದರು.
ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಚಿತ್ರ ನಿರ್ಮಿಸಿದ್ದಾರೆ. 'ಸಿನಿಮಾ ಮಾಡಿರುವ ಬಗ್ಗೆ ಖುಷಿ ಇದೆ. ಲಾಕ್ಡೌನ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೆವು' ಎಂದರು.
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಭರತ್ ಸಿನಿಮಾ ನಿರ್ದೇಶಿಸಿದ್ದಾರೆ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ. ಧಾರವಾಡದ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ.