ಭಾರತೀಯ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯದಿಂದಲೇ ಹೆಸರು ಮಾಡಿರುವ ನಟ ಅನಂತ್ ನಾಗ್. ಈ ಎವರ್ಗ್ರೀನ್ ಸ್ಟಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಐದು ದಶಕಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು 'ಸುವರ್ಣ ಅನಂತ ಸಂಭ್ರಮ' ಎಂಬ ಕಾರ್ಯಕ್ರಮ ಆಯೋಜಿಸಿ ಮೇರು ನಟನಿಗೆ ಅಭಿನಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಅನಂತ್ ನಾಗ್ ಜೊತೆ ನಟ ರಮೇಶ್ ಅರವಿಂದ್ ಸಂವಾದ ನಡೆಸಿದರು.
ಸತತ ಐವತ್ತು ವರ್ಷದ ಸಿನಿ ಪಯಣವನ್ನು ಮೆಲುಕು ಹಾಕಿದ ಅನಂತ್ ನಾಗ್ ಅವರು ಬಾಲ್ಯದ ದಿನಗಳು, ಅಧ್ಯಾತ್ಮಿಕ ವಾತಾವರಣ, ಸಂಗೀತ, ತಬಲಾ ಕಲಿತಿದ್ದು, ನಂತರ ಮುಂಬೈಗೆ ಹೋಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾ ಮಧ್ಯೆ ರಂಗಭೂಮಿ ಹೋಗಿ ಪಾತ್ರಗಳನ್ನು ಮಾಡಿದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.
ಆ ದಿನಗಳನ್ನು ಮೆಲುಕು ಹಾಕಿದ ಅವರು, "ನನ್ನ ಬಾಲ್ಯದ ದಿನಗಳು ಅಧ್ಯಾತ್ಮಿಕ ವಾತಾವರಣದಲ್ಲಿತ್ತು. ಅಲ್ಲೆಲ್ಲ ಸಂಗೀತ, ಹಾರ್ಮೋನಿಯಮ್, ತಬಲ ಕಲಿತೆ. ಆಗ ನನಗೆ ಯಾವುದೇ ನಿರ್ದಿಷ್ಟವಾದ ಗುರಿ ಇರಲಿಲ್ಲ. ಒಮ್ಮೆ ವಿಜ್ಞಾನ ಮತ್ತೊಮ್ಮೆ ಆರ್ಟ್ಸ್, ಕಾಮರ್ಸ್ ಅಂತ ಬದಲಾಯಿಸುತ್ತಿದ್ದೆ. ಸುಮಾರು ಐದು ವರ್ಷ ರಂಗಭೂಮಿಯಲ್ಲಿ ಕಳೆದೆ. ಚಿಕ್ಕಂದಿನಿಂದಲೂ ಇನ್ನೊಬ್ಬರ ಹಾವಭಾವವನ್ನು ನೋಡಿ ನಕಲು ಮಾಡುವ ಅಭ್ಯಾಸವಿತ್ತು. ಅದು ನಂತರ ಮಠಗಳಲ್ಲಿ ಕಲಿತ ಮಂತ್ರಘೋಷ ಕಲೆಗೆ ಹಾಗೂ ಸ್ಪಷ್ಟ ಉಚ್ಚಾರಣೆಗೆ ಪೂರಕವಾದವು" ಎಂದು ಹೇಳಿದರು.
ಅನಂತನಾಗ್ ಅವರಿಗೆ ಪರೀಕ್ಷೆ ಎಂದರೆ ದೊಡ್ಡ ಭಯವಿತ್ತಂತೆ. ಅದು ಬಿಟ್ಟರೆ ಭಯ, ಸಿಟ್ಟು ಎಲ್ಲ ಕಡಿಮೆ. ಇನ್ನು, ನಟನೆಯ ವಿಷಯಕ್ಕೆ ಬಂದರೆ, ಹಾಸ್ಯದ ಪಾತ್ರಗಳು ನೋಡೋಕೆ ಚೆಂದ, ಆದರೆ ನಟಿಸುವುದು ಬಹಳ ಕಷ್ಟ ಎಂದು ನಗುತ್ತಾ ಹೇಳಿದರು. ಇದರ ಜೊತೆಗೆ ರಮೇಶ್ ಅರವಿಂದ್ ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಅನಂತನಾಗ್, "ಭಗವಂತನ ಶಕ್ತಿ ಇಲ್ಲದೆ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ನಾನೊಬ್ಬ ತೆರೆಯ ಮೇಲೆ ಕಾಣುತ್ತೇನೆ ಎಂದರೆ ಅದರ ಹಿಂದೆ ಅನೇಕರ ಶ್ರಮವಿರುತ್ತದೆ. ಕಥೆ ಬರೆದವರು, ನಿರ್ದೇಶಕರು, ಕ್ಯಾಮರಾ ಹೀಗೆ ಹಲವರು. ಅವರೆಲ್ಲರ ಶಕ್ತಿ ಜೊತೆಗೆ ದೇವರ ಕೃಪೆಯು ಇರಬೇಕು ಅಥವಾ ಆ ಶಕ್ತಿಗಳನ್ನೇ ದೇವರು ಎಂದು ನಂಬುತ್ತೇನೆ. ಬಹಳಷ್ಟು ರಿಹರ್ಸಲ್ ಬಳಿಕವೂ ಒಮ್ಮೊಮ್ಮೆ ತೆರೆಯ ಮೇಲೆ ಅಂದುಕೊಂಡಿದ್ದಕ್ಕಿಂತಲೂ ವಿಭಿನ್ನವಾಗಿ ಮೂಡಿಬರುತ್ತದೆ ಎಂದರೆ ಅಲ್ಲಿ ಏನೋ ಶಕ್ತಿ ಕೆಲಸ ಮಾಡುತ್ತಿದೆ ಎಂದರ್ಥ" ಎಂದು ಮನಬಿಚ್ಚಿ ಮಾತನಾಡಿದರು.